ವಿಜಯವಾಣಿ ಸುದ್ದಿಜಾಲ ಧಾರವಾಡ
ಅನಾರೋಗ್ಯ ಉಂಟು ಮಾಡುವ ಆಹಾರ ಪದಾರ್ಥಗಳನ್ನು ದೂರವಿಟ್ಟು, ಸಾವಯವ ಪದ್ಧತಿಯಲ್ಲಿ ಬೆಳೆದ ಧಾನ್ಯಗಳನ್ನು ಸೇವಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಬೇಕಿದೆ ಎಂದು ಕೃಷಿ ವಿಶ್ವ ವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ಎಸ್.ಎ. ಗದ್ದನಕೇರಿ ಅಭಿಪ್ರಾಯಪಟ್ಟರು.
ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆ ನಿಮಿತ್ತ ನಗರದ ಸಹಜ ಸಮೃದ್ಧ ಸಂಸೆ ವತಿಯಿಂದ ಲಿಂಗಾಯತ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ಸಾವಯವ ಮತ್ತು ಸಿರಿಧಾನ್ಯ ಸುಗ್ಗಿಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಆಹಾರ ಧಾನ್ಯಗಳಲ್ಲಿನ ಪೋಷಕಾಂಶಗಳನ್ನು ತೆಗೆದ ಬಳಿಕ ಸೇವಿಸುವ ರೂಢಿ ಹೆಚ್ಚುತ್ತಿದೆ. ಅದನ್ನು ತಿಂದ ನಂತರ, ಅನಾರೋಗ್ಯ ಉಂಟಾಗಿ ಔಷಧಿ ಮೊರೆ ಹೋಗುತ್ತೇವೆ. ಅದಕ್ಕೆ ಪರ್ಯಾಯವಾಗಿ ನಿಸರ್ಗಸ್ನೇಹಿ ಪದ್ಧತಿಯಲ್ಲಿ ಬೆಳೆದ ಆಹಾರ ಧಾನ್ಯಗಳನ್ನು ಸೇವಿಸೋಣ ಎಂದರು.
ಡಾ. ವಿ.ಎಸ್. ಪಾಟೀಲ ಮಾತನಾಡಿ, ಐದಾರು ದಶಕಗಳಿಂದ ಕ್ರಮೇಣ ತೆರೆಮರೆಗೆ ಸರಿದಿದ್ದ ಸಿರಿಧಾನ್ಯಗಳು ಈಗ ಮತ್ತೆ ಗ್ರಾಹಕರ ಮನ ಗೆಲ್ಲುವ ಹಂತಕ್ಕೆ ಬಂದಿವೆ. ಇವುಗಳ ಸಂಸ್ಕರಣೆಯೇ ದೊಡ್ಡ ಸವಾಲಾಗಿದ್ದು, ತಂತ್ರಜ್ಞಾನದ ನೆರವಿನಿಂದ ಆ ಸಮಸ್ಯೆಗೂ ಪರಿಹಾರ ಸಿಕ್ಕಿದೆ. ಸಿರಿಧಾನ್ಯಗಳ ಮೌಲ್ಯವರ್ಧನೆ ಮಾಡಿ, ಬಗೆಬಗೆಯ ತಿಂಡಿ ತಿನಿಸು ತಯಾರಿಸುವ ಕುರಿತು ನಮ್ಮ ಕಾಲೇಜಿನಲ್ಲಿ ತರಬೇತಿ ಆಯೋಜಿಸಲಾಗುತ್ತಿದ್ದು, ರೈತರು ಹಾಗೂ ಗ್ರಾಹಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಡಾ. ಶೇಖರಪ್ಪ, ಪ್ರವೀಣ ಹೆಬ್ಬಳ್ಳಿ, ಬಸವರಾಜ ಮುಂದಿನಮನಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಿರಿಧಾನ್ಯ ಸಂರಕ್ಷಕಿ ಅನ್ನಪೂರ್ಣ ಪಂಚಾಕ್ಷರಿಮಠ ಮಾತನಾಡಿ, ರೈತರು ಬೆಳೆಯನ್ನು ಬೆಳೆಯುವುದರ ಜತೆಗೆ ಅದರ ಮೌಲ್ಯವರ್ಧನೆ ಹಾಗೂ ಸೇವನೆಯತ್ತಲೂ ಗಮನ ಹರಿಸಬೇಕು. ಪೋಷಕಾಂಶಗಳಿಂದ ತುಂಬಿರುವ ಸಿರಿಧಾನ್ಯಗಳನ್ನು ಊಟದ ತಟ್ಟೆಗೆ ತರಲು ಎಲ್ಲರೂ ಮುಂದಾಗಬೇಕು ಎಂದರು.
ಮೇಳದಲ್ಲಿ ಸಿರಿಧಾನ್ಯಗಳ ತರಹೇವಾರಿ ತಳಿಗಳು, ಬೇಳೆ ಕಾಳು, ತರಕಾರಿ, ಸೊಪ್ಪು ಬಿತ್ತನೆ ಬೀಜಗಳು, ಜೈವಿಕ ಕೀಟನಾಶಕ, ಬೆಳೆವರ್ಧಕ ಹಾಗೂ ಸಾವಯವ ಗೊಬ್ಬರಗಳ ಪ್ರದರ್ಶನ ಗಮನ ಸೆಳೆಯುತ್ತಿದೆ. ಅದರಲ್ಲೂ ಐವತ್ತಕ್ಕೂ ಹೆಚ್ಚು ದೇಸಿ ರಾಗಿ, 40 ತಳಿ ಮುಂಗಾರು ಜೋಳಗಳು ಆಕರ್ಷಣೆಯ ಕೇಂದ್ರವಾಗಿವೆ.
ಶ್ರೀದೇವಿ ಭೂತಪಳ್ಳಿ ಸ್ವಾಗತಿಸಿದರು. ನಿಶಾಂತ ಬಂಕಾಪುರ ನಿರೂಪಿಸಿದರು. ಈಶ್ವರ ಅಂಗಡಿ ವಂದಿಸಿದರು.