ಸೇಡಂ: ಮಾನವ ಕ್ಷಣಿಕ ಸುಖಕ್ಕಾಗಿ ಪ್ರಕೃತಿಯ ಸಂಪನ್ಮೂಲವನ್ನು ಮಿತಿ ಮೀರಿ ಬಳಸುತ್ತಿರುವುದರಿಂದ ಅಸಮತೋಲನ ಸೃಷ್ಟಿಯಾಗಿ ಜೀವ ಜಂತುಗಳಿಗೆ ಆಪತ್ತು ಉಂಟಾಗಿದ್ದು, ನಿಸರ್ಗದೊಂದಿಗೆ ಚೆಲ್ಲಾಟವಾಡಿದರೆ ಯಾರಿಗೂ ಉಳಿಗಾಲವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಎಚ್ಚರಿಕೆ ನೀಡಿದರು.
ಬೀರನಹಳ್ಳಿ ಕ್ರಾಸ್‌ನ ಪ್ರಕೃತಿ ನಗರದಲ್ಲಿ ಕೊತ್ತಲ ಸ್ವರ್ಣ ಹಾಗೂ ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಪ್ರಕೃತಿ ಮತ್ತು ನಾವು ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಪೂರ್ವಜರು ಸೂರ್ಯ-ಚಂದ್ರ, ಗಾಳಿ-ನೀರು, ಕಲ್ಲು-ಮಣ್ಣು ಸೇರಿ ನಿಸರ್ಗವನ್ನು ಪೂಜ್ಯನೀಯ ಭಾವದಿಂದ ಕಾಣುತ್ತಿದ್ದರು. ಆದರೀಗ ಮಾನವ ತನ್ನ ಅತಿಯಾದ ಆಸೆಯಿಂದ ಪರಿಸರ ಕಲುಷಿತಗೊಳಿಸುವ ಮೂಲಕ ವಿಕೃತಿ ಮೆರೆಯುತ್ತಿದ್ದಾನೆ. ಇದು ಇಲ್ಲಿಗೆ ನಿಲ್ಲಬೇಕಾದ ಅಗತ್ಯವಿದೆ ಎಂದರು.
ಹಿAದಿನAತೆ ಪ್ರತಿ ಮನೆ ಮುಂದೆ ಆಕಳು ಕಟ್ಟುವ ಸಂಸ್ಕೃತಿ ಪುನಃ ಆರಂಭಿಸಬೇಕಾಗಿದೆ. ಇದರಿಂದ ನಮಗೆ ಬೇಕಾಗುವ ಹಾಲು, ಮೊಸರು, ತುಪ್ಪ ಸಿಗುವುದರ ಜತೆಗೆ ಆರೋಗ್ಯಯುತ ಜೀವನವೂ ಸಾಧ್ಯವಾಗಲಿದೆ. ರಾಜಕಾರಣಿಗಳು ಎಲ್ಲದಕ್ಕೂ ರಾಜಕೀಯ ಮಾಡದೆ ಅಭಿವೃದ್ಧಿ ದೃಷ್ಟಿಕೋನ ಹೊಂದಬೇಕಿದೆ. ನಾವು ಪ್ರತಿನಿಧಿಸುವ ಕ್ಷೇತ್ರವನ್ನು ಮಾದರಿಯಾಗಿಸುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುವುದು ಅಗತ್ಯ ಎಂದು ಹೇಳಿದರು.
ಈ ಭಾಗದ ೩೭೦ ಹಳ್ಳಿ ಜನರ ಅನುಕೂಲಕ್ಕಾಗಿ ಸಕ್ಕರೆ (ಎಥೆನಾಲ್) ಕಂಪನಿ ಆರಂಭಿಸಿದ್ದು, ರೈತರಿಗೆ ಉತ್ತಮ ಬೆಲೆ ನೀಡಿ ಕಬ್ಬು ಖರೀದಿಸುತ್ತಿರುವುದನ್ನು ಸಹಿಸದ ಕೆಲವರು ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಅಡ್ಡಗಾಲು ಹಾಕಿದ್ದರು. ಇದೀಗ ನ್ಯಾಯಾಲಯ ಕಾರ್ಖಾನೆ ಆರಂಭಕ್ಕೆ ಸೂಚಿಸಿದೆ. ಶೀಘ್ರವೇ ಪುನಃ ಆರಂಭಿಸುವ ಮೂಲಕ ಸಾವಿರಾರು ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಭಾರತ ವಿಕಾಸ ಸಂಗಮದಿAದ ನಾಡು ಸಮೃದ್ಧಿ ಹೊಂದಲಿದೆ. ಆರು ಭಾರತೀಯ ಸಂಸ್ಕೃತಿ ಉತ್ಸವ ಪೂರ್ಣಗೊಳಿಸಿ ಇದೀಗ ೭ನೇ ಉತ್ಸವ ಸಂಭ್ರಮ ಮೂಲಕ ದೇಶದ ಉದ್ದಗಲಕ್ಕೂ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗಿದೆ ಎಂದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಸಹ ಸಂಘಚಾಲಕ ದೂಸಿ ರಾಮಕೃಷ್ಣರಾವ್ ಮಾತನಾಡಿ, ಪ್ರಕೃತಿಯ ಆರಾಧನೆಯಿಂದ ಮನುಷ್ಯ ಜೀವನ ಆರೋಗ್ಯಯುತ ಆಗಿರಲಿದೆ. ಹಾಗಾಗಿ ಬದುಕಿನ ಪದ್ಧತಿಯಲ್ಲಿ ಕೆಲ ಬದಲಾವಣೆ ಅಗತ್ಯವಿದೆ. ಪಂಚಕೋಶದ ವಿಕಾಸಕ್ಕಾಗಿ ಪ್ರಕೃತಿ ರಕ್ಷಣೆ ಮಾಡಬೇಕಿದ್ದರಿಂದ ಸಸಿ ನೆಟ್ಟು ಪೋಷಿಸಿ ಹಸಿರು ವಾತಾವರಣ ಸೃಷ್ಟಿಸುವ ಕೆಲಸ ನಮ್ಮಿಂದಲೇ ಆರಂಭವಾಗಬೇಕಿದೆ ಎಂದು ಕರೆ ನೀಡಿದರು.
ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಸದಸ್ಯೆ ಭಾಷಾ ಸುಂಬಲಿ ಮಾತನಾಡಿ, ಸನಾತನ ಧರ್ಮ ಶಾಂತಿಯುತ ಬದುಕು ನಡೆಸುವುದನ್ನು ಕಲಿಸಿಕೊಡುತ್ತದೆ. ಆದರೆ ಈ ದೇಶದ ಶಿಖರ ಕಾಶ್ಮೀರದಲ್ಲಿ ಸನಾತನ ಧರ್ಮದ ಅಸ್ತಿತ್ವ ಉಳಿಸಲು ಪರದಾಡಬೇಕಾಗಿದೆ ಎಂದರು.
ಭಾರತ ವಿಕಾಸ ಸಂಗಮದ ರಾಷ್ಟಿçÃಯ ಸಂಯೋಜಕ ಕೆ.ಎನ್. ಗೋವಿಂದಾಚಾರ್ಯ, ಅಂಚೆ ಇಲಾಖೆ ಕಲಬುರಗಿ ವಲಯ ಮುಖ್ಯಸ್ಥ ಆರ್.ಅಶೋಕ, ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಅಧ್ಯಕ್ಷೆ ಶಕ್ತಿ ಮುನ್ಸಿಜಿ, ತೆಲಂಗಾಣದ ಹಸಿರು ಕ್ರಾಂತಿ ಪರಿಷತ್ ಅಧ್ಯಕ್ಷೆ ಲೀಲಾ ಲಕ್ಷ್ಮಾರೆಡ್ಡಿ, ಮಹಾದೇವ, ಶಾಮ ಪರೇಡ್, ಗುರುರಾಜ ಕರ್ಜಗಿ, ಮಾಜಿ ಸಂಸದ ಶಿವರಾಮೇಗೌಡ, ಇಂದ್ರಮಣಿ, ರವಿಪ್ರಕಾಶ ನೇರಟಿ, ಗಿರೀಶ ಮಾಳಾ ಇದ್ದರು.
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂರಕ್ಷಕ ಡಾ.ಬಸವರಾಜ ಪಾಟೀಲ್ ಸೇಡಂ ಪ್ರಾಸ್ತಾವಿಕ ಮಾತನಾಡಿದರು. ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ಸ್ವಾಗತಿಸಿದರು. ತಿಪ್ಪಯ್ಯ ನಿರೂಪಣೆ ಮಾಡಿ ವಂದಿಸಿದರು. ಅಂಚೆ ಇಲಾಖೆ ಹೊರತಂದ ಶ್ರೀ ಕೊತ್ತಲ ಬಸವೇಶ್ವರ ಸ್ವರ್ಣ ಜಯಂತಿ ನೆನಪಿಗಾಗಿ ಕವರ್ ಬಿಡುಗಡೆಗೊಳಿಸಲಾಯಿತು.