ಎಚ್.ಡಿ.ಕೋಟೆ: ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯದಿಂದ ಮೃತಪಟ್ಟ ಆದಿವಾಸಿ ಜೇನು ಕುರುಬ ಜನಾಂಗದ ಕರಿಯಪ್ಪ ಪ್ರಕರಣವನ್ನು ಅತಿ ಸೂಕ್ಷ್ಮ ಪ್ರಕರಣವೆಂದು ಪರಿಗಣಿಸಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಮುಖ್ಯಮಂತ್ರಿ ಆದೇಶಿಸಬೇಕೆಂದು ಒತ್ತಾಯಿಸಿ ತಾಲೂಕು ಆದಿವಾಸಿ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.
ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗ ಸೇರಿದ ಪ್ರತಿಭಟನಾಕಾರರು, ಹೊಸಹಳ್ಳಿ ಹಾಡಿಯ ಕರಿಯಪ್ಪನನ್ನು ಅರಣ್ಯ ಇಲಾಖೆ ನೌಕರರು ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿ, ಹಿಂಸೆ ನೀಡಿ ಸಾವಿಗೆ ಕಾರಣವಾಗಿದ್ದಾರೆ. ಈಗಾಗಲೇ ಅರಣ್ಯ ಇಲಾಖೆಯ 17 ನೌಕರರ ಮೇಲೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಎಸ್ಸಿ, ಎಸ್‌ಟಿ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೆ ನೌಕರರನ್ನು ಅಮಾನತುಪಡಿಸುವುದಾಗಲಿ, ಬಂಧಿಸುವುದಾಗಲಿ ಮಾಡದೇ, ಪ್ರಕರಣವನ್ನು ಮುಚ್ಚಿ ಹಾಕುವ ಸಂಚು ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ. ಪ್ರಕರಣ ನಡೆದು 15 ದಿನ ಕಳೆದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಲಾಗಿದ್ದರೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಆದಿವಾಸಿ ಮುಖಂಡ ವಡ್ಡರಗುಡಿ ಚಿಕ್ಕಣ್ಣ ಮಾತನಾಡಿ, ಕರಿಯಪ್ಪ ಪ್ರಕರಣದಲ್ಲಿ ಮೇಲ್ನೋಟಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ನೌಕರರು ತಪ್ಪಿತಸ್ಥರೆಂದು ಕಂಡುಬಂದರೂ ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಕರಿಯಪ್ಪ ಪ್ರಕರಣದಿಂದ ಆದಿವಾಸಿ ಸಮುದಾಯ ದುರ್ಬಲವಾಗಿದೆ, ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಒತ್ತಾಯಿಸಿದರು.
ಆರೋಪಿಗಳನ್ನು ತಕ್ಷಣ ಕೆಲಸದಿಂದ ವಜಾಗೊಳಿಸಿ, ನಿಷ್ಪಕ್ಷಗತವಾಗಿ ತನಿಖೆ ನಡೆಸಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರ ನೀಡಬೇಕು, ಇಂತಹ ಘಟನೆಗಳು ಮರುಕಳಿಸಿದಂತೆ ಸರ್ಕಾರ ಕ್ರಮವಹಿಸಬೇಕು. ಡಾ.ಮುಜಾಫರ್ ಅಸ್ಸಾದಿ ವರದಿ 2014ರಲ್ಲಿ 3814 ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಹೈಕೋರ್ಟ್ ಮಾನ್ಯ ಮಾಡಿದ್ದರೂ ಸಹ ಅನುಷ್ಠಾನಗೊಂಡಿಲ್ಲ. ಅದು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂಬ ಒತ್ತಾಯಿಸಿ ಉಪ ತಹಸೀಲ್ದಾರ್ ಮಹೇಶ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಗೆ ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ಬೆಂಬಲ ವ್ಯಕ್ತಪಡಿಸಿದರು. ಜೇನು ಕುರುಬ ಜಿಲ್ಲಾ ಅಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಟಿ ರಾಜಪ್ಪ, ಗ್ರಾಪಂ ಸದಸ್ಯ ಕರಿಯಪ್ಪ, ಬಸವಣ್ಣ, ಕಾಳಪ್ಪ, ಚಂದು, ಚಾ.ಶಿವಕುಮಾರ್, ಉಮೇಶ್, ಎಡತೊರೆ ನಾಗರಾಜು, ಆನಗಟ್ಟಿ ದೇವರಾಜು, ಜಿವಿಕ ಬಸವರಾಜು, ಚೌಡಹಳ್ಳಿ ಜವರಯ್ಯ, ಕಂದೇಗಾಲ ಶ್ರೀನಿವಾಸ್, ಭಾಸ್ಕರ ಇದ್ದರು.