ಜಿಲ್ಲೆ

ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ವಿಜಯವಾಣಿ ಸುದ್ದಿಜಾಲ ಧಾರವಾಡ
ಜೈನಮುನಿ ರಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಘಟನೆಯನ್ನು ವಿಶ್ವ ಹಿಂದು ಪರಿಷದ್ ತೀವ್ರ ಖಂಡಿಸುತ್ತದೆ ಎಂದು ವಿಎಚ್‌ಪಿ ಧಾರ್ಮಿಕ ವಿಭಾಗದ ರಾಜ್ಯ ಪ್ರಭಾರಿ ಬಸವರಾಜ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೂಡಲೇ ವಿಶೇಷ ತನಿಖಾ ತಂಡ ರಚಿಸಿ, ನಿಷ್ಪಕ್ಷಪಾತವಾಗಿ ಸಮಗ್ರ ತನಿಖೆ ನಡೆಸಿ ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜೈನ ಮುನಿಗಳು ಜಗತ್ತಿನ ಜಂಜಡಗಳಿಂದ ದೂರವಾಗಿ ಅಹಿಂಸಾ ಮಾರ್ಗ ಅನುಸರಿಸಿದವರು. ಅಂತಹ ಶಾಂತ ಸ್ವಭಾವದ ಮುನಿಗಳನ್ನು ಹತ್ಯೆ ಮಾಡಿದ್ದರಿಂದ ರಾಜ್ಯದಲ್ಲಿ ಇರುವ ಸಾಧುಸಂತರಲ್ಲಿ ಭಯದ ಮೂಡಿದೆ. ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಹಾಗೂ ರಾಷ್ಟ್ರದ ಹಿತ ಕಾಪಾಡಲು ಸಮಾನ ನಾಗರಿಕ ಸಂಹಿತೆ ಜಾರಿ ಆಗುವುದು ಅತ್ಯವಶ್ಯಕ. ಈ ಬಗ್ಗೆ ಏನನ್ನೂ ಯೋಚಿಸದೇ ಪ್ರಧಾನಿ ನರೇಂದ್ರ ಮೋದಿ ಆದಷ್ಟು ಬೇಗ ಕಾನೂನು ಜಾರಿಗೊಳಿಸಬೇಕು ಎಂದರು.
ರಾಜ್ಯಾಧ್ಯಕ್ಷ ಎಸ್.ಆರ್. ರಾಮನಗೌಡರ, ಬಸವರಾಜ ಕೌಜಲಗಿ, ಪ್ರೊ. ಮಹೇಶ ಪಾಟೀಲ, ವಿರೂಪಾಕ್ಷ ಜೋಡಳ್ಳಿ, ಲಕ್ಷ್ಮಣ ಹೂಗಾರ, ಇತರರು ಇದ್ದರು.