ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನರ್ಸಿಂಗ್ ವೃತ್ತಿಯನ್ನು ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ ಹಾಗೂ ಸಮಯಪಾಲನೆಯೊಂದಿಗೆ ನಿರ್ವಹಿಸಬೇಕು ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಶ್ರೀನಿವಾಸ ಎಲ್.ಡಿ. ಹೇಳಿದರು.
ನಗರದ ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೆಎಲ್ಇ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ನ ಜಿಎನ್ಎಂ ಮತ್ತು ಬೇಸಿಕ್ ಬಿಎಸ್ಸಿ ನರ್ಸಿಂಗ್ ಕೋರ್ಸ್ನ 22ನೇ ಬ್ಯಾಚ್ನ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಕೌಶಲ, ಉತ್ತಮ ಸಂವಹನ ಹಾಗೂ ಜ್ಞಾನ ಸಂಪಾದನೆಯಿಂದ ನರ್ಸಿಂಗ್ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಡೆಪ್ಯೂಟಿ ರಿಜಿಸ್ಟ್ರಾರ್ ಡಾ. ಅಜಂತಾ ಡಿ.ಎಸ್. ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಯು ವೈದ್ಯರ ಡಿಗ್ರಿ ಹಾಗೂ ನರ್ಸಿಂಗ್ ಕೇರ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುತ್ತಾರೆ. ನರ್ಸಿಂಗ್ ಎಂಬುದು ಕೇವಲ ಒಂದು ವೃತ್ತಿಯಲ್ಲ. ಮಾನವೀಯತೆಯಿಂದ ಸೇವೆ ಸಲ್ಲಿಸಲು ಇರುವ ಅವಕಾಶವಾಗಿದೆ. ನರ್ಸ್ಗಳ ಬಹುಮುಖ್ಯ ಪಾತ್ರದಿಂದ ಮಾತ್ರ ಆರೋಗ್ಯ ಸೇವೆಯು ಪರಿಪೂರ್ಣಗೊಳ್ಳುತ್ತದೆ ಎಂದು ಹೇಳಿದರು.
ಹುಬ್ಬಳ್ಳಿ ಆಯುರ್ವೆದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್. ಮಾತನಾಡಿದರು. ಕೆಎಲ್ಇ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ನ ಪ್ರಾಚಾರ್ಯ ಡಾ. ಸಂಜಯ ಪೀರಾಪುರ ಸ್ವಾಗತಿಸಿದರು. ಡಾ. ಆಶಾ ಭಟಖಂಡೆ ಪ್ರತಿಜ್ಞಾವಿಧಿ ಬೋಧಿಸಿದರು. ಜೆ. ವೀಣಾ ಜಸ್ಸಿ ನಿರೂಪಿಸಿದರು. ಡಾ. ಸೋಮಶೇಖರಯ್ಯ ಕಲ್ಮಠ ವಂದಿಸಿದರು.