ಬೀದರ್: ಜನಕಲ್ಯಾಣ, ಜಗಕಲ್ಯಾಣ ಮಾಡಿದವರ ಹೆಸರು ಮಾತ್ರ ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ ಹೇಳಿದರು.
ಜಿಲ್ಲಾ ಕನ್ನಡ ಸಾತ್ಯ ಪರಿಷತ್ ಹಾಗೂ ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಗಳ ಸಂಘದಿಂದ ಇಲ್ಲಿನ ಕರ್ನಾಟಕ ಫಾರ್ಮಸಿ ಕಾಲೇಜಿನಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಗಡಿ ಭಾಗದ ಕನ್ನಡ ಶಾಲೆಗಳ ಸ್ಥಿತಿಗತಿಗಳ ಚಿಂತನೆ ಹಾಗೂ ಶ್ರೀದೇವಿ ಹೂಗಾರ ರಚಿತ `ಕನ್ನಡದ ಕಟ್ಟಾಳು ಪಂಚಾಕ್ಷರಿ ಪುಣ್ಯಶೆಟ್ಟಿ' ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಸೇವೆ ಸಲ್ಲಿಸುವ ತುಡಿತ ಎಲ್ಲರಲ್ಲಿ ಇರಬೇಕು ಎಂದರು.
ಪುಣ್ಯಶೆಟ್ಟಿ ಅವರ ಸಾಹಿತ್ಯ ಕೃಷಿ, ಸಮಾಜ ಚಿಂತನೆ ಮಾದರಿ. ಅವರು 85 ವರ್ಷದ ತರುಣರು. ಅವರ ಜೀವನೋತ್ಸಾಹದಲ್ಲಿ ವಯಸ್ಸಿನ ಛಾಯೆ ಇಲ್ಲ. ದಣಿವರಿಯದೆ ಕನ್ನಡ ಕೆಲಸ ಮಾಡುತ್ತಿದ್ದಾರೆ. ಪ್ರಶಸ್ತಿಗಿ ಮಾಡುವುದು ನಿಜವಾದ ಕನ್ನಡ ಕಟ್ಟುವ ಕೆಲಸ ಅಲ್ಲ. ತೋರಿಕೆಗಾಗಿ ಮಾಡುವ ಕೆಲಸ ಸ್ವಾರ್ಥದಿಂದ ಕೂಡಿರುತ್ತದೆ. ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಮಾತೃಭಾಷೆ ರಕ್ಷಣೆ ಮಾಡುವವರು ನಮಗೆ ಬೇಕಾಗಿದ್ದಾರೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಕನ್ನಡಕ್ಕಾಗಿ ದುಡಿದವರನ್ನು ಗುರುತಿಸಿ ಅವರ ಚರಿತ್ರೆಗೆ ಅಕ್ಷರ ರೂಪ ನೀಡುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಕರ್ನಾಟಕ ಫಾರ್ಮಸಿ ಕಾಲೇಜು ಪ್ರಾಚಾರ್ಯ ಡಾ.ಕ್ರಾಂತಿಕುಮಾರ ಸಿರ್ಸೆ, ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿವಕುಮಾರ ಪಾಟೀಲ್ ತೇಗಂಪುರ, ಶಶಿಧರ ಕೋಸಂಬೆ, ಶ್ರೀದೇವಿ ಹೂಗಾರ, ಸಂಗಮೇಶ ಜಾಂತೆ ಇದ್ದರು. ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಡಾ.ಬಸವರಾಜ ಬಲ್ಲೂರ್ ನಿರೂಪಣೆ ಮಾಡಿದರು. ದೇವೇಂದ್ರ ಕರಂಜೆ ವಂದಿಸಿದರು.
ಒಂದೊಮ್ಮೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಿದ್ದ ಈ ಗಡಿಭಾಗ ರಾಜಧಾನಿಯಿಂದ ದೂರವಿರುವ ಕಾರಣ ನಿರ್ಲಕ್ಷೃಕ್ಕೆ ಒಳಗಾಗಿದೆ. ಅದನ್ನು ಸರಿಪಡಿಸಿ ಎಲ್ಲರನ್ನೂ ಮುಖ್ಯ ವಾಹಿನಿಗೆ ತರಬೇಕಾದ ಜವಾಬ್ದಾರಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಮೇಲಿದೆ.| ಶ್ರೀ ಗುರುಬಸವ ಪಟ್ಟದ್ದೇವರುಭಾಲ್ಕಿ ಹಿರೇಮಠ ಸಂಸ್ಥಾನ