ಸೇಡಂ: ಸಮಾಜದಲ್ಲಿ ಮನುಷ್ಯ ನಿಷ್ಠುರವಾದ ಬದುಕು ನಡೆಸಬೇಕಾದರೆ, ಜೀವನದಲ್ಲಿ ಓದು ಅತ್ಯಂತ ಅವಶ್ಯವಾಗಿದೆ ಎಂದು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ನರ್ಮದಾದೇವಿ ಗಿಲ್ಡಾ ಮಹಿಳಾ ಮಹಾವಿದ್ಯಾಲಯದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ನೃಪತುಂಗ ಅಧ್ಯಯನ ಸಂಸ್ಥೆ ಹಾಗೂ ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದಿಂದ ಶಾಂತರಸರ ಜನ್ಮ ಶತಮಾನೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಬದುಕು ಬರಹ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಾಡಿನ ಸಾಂಸ್ಕøತಿಕ ಲೋಕಕ್ಕೆ ಕಲ್ಯಾಣ ಕರ್ನಾಟಕ ಅನೇಕ ಸಾಹಿತಿ, ಬರಹಗಾರರು, ಕಲಾವಿದರನ್ನು ನೀಡಿದೆ. ನಮ್ಮ ಭಾಗದ ಜನಪ್ರತಿನಿಧಿಗಳ ಇಚ್ಛಾಸಕ್ತಿಯ ಕೊರತೆಯಿಂದ ಅವರ್ಯಾರು ಬೆಳಕಿಗೆ ಬಾರದೆ, ಮರೆಯಾಗುತ್ತಿದ್ದಾರೆ. ಶಾಂತರಸರ ಜನ್ಮ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸಲು ಮುಂದಾದರೆ ನಮ್ಮ ಸಹಕಾರ ಇರಲಿದೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್ ಮಾತನಾಡಿ, ಲೇಖಕರಾದವರಿಗೆ ಸಮಾಜಮುಖಿ ಮತ್ತು ಜನಪರ ಕಾಳಜಿ ಇರಬೇಕು. ಅಂತಹ ನಡೆ, ನುಡಿ ಶಾಂತರಸರಲ್ಲಿತ್ತು, ಅವರ ಸಮಗ್ರ ಸಾಹಿತ್ಯದ ಕೃತಿಯನ್ನು ಅಕಾಡೆಮಿಯಿಂದ ಹೊರತರಲಾಗುವುದು. ಪ್ರತಿಷ್ಠಾನ ಸ್ಥಾಪಿಸುವ ಬಗ್ಗೆ ಅಕಾಡೆಮಿ ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.
ವಾಣಿಜ್ಯ ಇಲಾಖೆ ನಿವೃತ್ತ ಉಪ-ಆಯುಕ್ತ ಎಚ್.ಎಸ್.ಬಸವಪ್ರಭು, ರಂಗ ಸಂಗಮ ಕಲಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿದರು.
ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಕಾರ್ಯದರ್ಶಿ ಅನುರಾಧ ಪಾಟೀಲ್ ಇದ್ದರು. ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಸ್ವಾಗತಿಸಿದರು. ಪ್ರಾಚಾರ್ಯ ಆರೋಗ್ಯಪ್ಪ ಮುಕ್ತೆದಾರ ವಂದಿಸಿದರು.