ಜಿಲ್ಲೆ

ನಿಷ್ಕಲ್ಮಶ ಮನಸ್ಸಿನ ಸಹಾಯ ವ್ಯರ್ಥವಲ್ಲ: ರೋಹಿತ್ ಚಕ್ರತೀರ್ಥ

ಮೈಸೂರು: ನಿಷ್ಕಲ್ಮಶ ಮನಸ್ಸಿನಿಂದ ಮಾಡಿದ ಸಹಾಯ ಎಂದಿಗೂ ವ್ಯರ್ಥವಾಗುವುದಿಲ್ಲ ಎನ್ನುವುದಕ್ಕೆ ತಾತಯ್ಯ ಅವರು ಸ್ಥಾಪಿಸಿರುವ ಅನಾಥಾಲಯವೇ ಸಾಕ್ಷಿ ಎಂದು ಪಠ್ಯಪುಸ್ತಕ ರಚನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಣ್ಣಿಸಿದರು.
ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಅನಾಥಾಲಯದಲ್ಲಿ ಶನಿವಾರ ಆಯೋಜಿಸಿದ್ದ ಎಂ.ವೆಂಕಟಕೃಷ್ಣಯ್ಯ (ತಾತಯ್ಯ) ಅವರ 178ನೇ ಜಯಂತ್ಯುತ್ಸವ ಹಾಗೂ ಎಂ.ವೆಂಕಟಕೃಷ್ಣಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದ ಬಡವರಿಗೆ ವಿದ್ಯೆ ದೊರೆಯಬೇಕು ಎನ್ನುವ ಸದುದ್ದೇಶದಿಂದ ಅನಾಥಾಲಯದ ಚುಕ್ಕಾಣಿ ಹಿಡಿದರು. ವಾಸಿಸಲು ಕೊಠಡಿ ವ್ಯವಸ್ಥೆ ಮಾಡಿಸಿ ವಾರಾನ್ನದ ಮೂಲಕ ವಿದ್ಯೆ ಕಲಿಸಲು ಅವಕಾಶ ಕಲ್ಪಿಸಿದರು. ಹೀಗೆ ಕಲಿತ ಅನೇಕರು ದೇಶ, ವಿದೇಶದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಖ್ಯಾತ ಸಾಹಿತಿ ಡಾ.ಎಸ್. ಎಲ್.ಭೈರಪ್ಪ ಸೇರಿ ಅನೇಕರು ತಾತಯ್ಯ ಅವರ ಸಹಕಾರ ಪಡೆದು ವಿದ್ಯಾಭ್ಯಾಸ ಮಾಡಿದ್ದರಿಂದ ಬಹು ಎತ್ತರಕ್ಕೆ ಬೆಳೆದು ಸಮಾಜದ ಆಸ್ತಿ ಅಗಿದ್ದಾರೆ ಎಂದು ಹೇಳಿದರು.
ನಿಷ್ಕಲ್ಮಶವಾಗಿ ಸಹಾಯ ಮಾಡಿದವರನ್ನು ಒಂದಲ್ಲಾ ಒಂದು ದಿನ ಮನ್ನಣೆ, ವಿವಿಧ ರೀತಿಯಲ್ಲಿ ಸ್ಮರಣೆ ಮಾಡಿಕೊಳ್ಳುತ್ತೇವೆ. ವೆಂಕಟಕೃಷ್ಣಯ್ಯ ಅವರನ್ನು 178 ವರ್ಷಗಳ ನಂತರವೂ ನಾವು ನೆನಪಿಸಿಕೊಳ್ಳುತ್ತಿರುವುದದೇ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಪ್ರತಿಲಾಪೇಕ್ಷೆ ಇಲ್ಲದೇ ಸಹಾಯ ಮಾಡಬೇಕು ಎಂದು ಹೇಳಿದರು.
ಒಮ್ಮೊಮ್ಮೆ ಪಡೆದ ಸಹಾಯದಿಂದ ಅಪಕಾರವೂ ಆಗುತ್ತದೆ. ಸಹಾಯ ಮಾಡಿದವರು ಪದೇ ಪದೆ ಅದನ್ನು ಬೇರೆಯವರ ಮುಂದೆ ಹೇಳುವುದರಿಂದ ಆ ಸಹಾಯಕ್ಕೆ ಬೆಲೆ ಬರುವುದಿಲ್ಲ. ಇದಲ್ಲದೇ ಕೆಲವರು ತಾವು ಸಹಾಯ ಮಾಡಿದ್ದಕ್ಕೆ ದೊಡ್ಡತನ ಮೆರೆಯುವುದು, ಅಹಂಕಾರ ತೋರುವುದೂ ಇದೆ. ಇದಕ್ಕೆ ಬದಲಾಗಿ ಸಹಾಯ ಪಡೆದವರು ತಮ್ಮಂತೆಯೆ ಅಗತ್ಯವಿರುವವರಿಗೆ ಸಹಾಯ ಮಾಡುವುದೇ ಬಹುದೊಡ್ಡ ಕೃತಜ್ಞತೆಯಾಗಿದೆ ಎಂದರು.
ಎಂ. ವೆಂಕಟಕೃಷ್ಣಯ್ಯ ಪ್ರಶಸ್ತಿ ಸ್ವೀಕರಿಸಿದ ಮಹಾರಾಜ ವಿದ್ಯಾಸಂಸ್ಥೆ (ಎಂಐಟಿ) ಅಧ್ಯಕ್ಷ ಡಾ.ಎಸ್.ಮುರುಳಿ ಅವರು, ಬಹು ಎತ್ತರ ವ್ಯಕ್ತಿತ್ವದ ತಾತಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸ ತಂದಿದೆ. ಪ್ರಶಸ್ತಿಯೊಂದಿಗೆ ನನಗೆ ನೀಡಲಾಗಿರುವ 25 ಸಾವಿರ ರೂ. ಜೊತೆಗೆ ನಮ್ಮ ಸಂಸ್ಥೆಯಿಂದ 75 ಸಾವಿರ ರೂ. ಸೇರಿಸಿ ಒಟ್ಟು ಒಂದು ಲಕ್ಷ ರೂ. ಅನ್ನು ನಾನು ಅಧ್ಯಯನ ಮಾಡಿದ ಶಾಲೆಯ ಅಭಿವೃದ್ಧಿಗೆ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾತಯ್ಯ ಅವರ ಹೆಸರಿನಲ್ಲಿ ಆಯೋಜಿಸಿದ್ದ ಚರ್ಚೆ, ಪ್ರಬಂಧ ಹಾಗೂ ವಿವಿಧ ಕ್ರೀಡಾ ಸ್ಪರ್ಧೆ ವಿಜೇತರಿಗೆ ಬಹುಮಾಣ ವಿತರಿಸಲಾಯಿತು. ತಾತಯ್ಯನವರ ಅನಾಥಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು.
ಅನಾಥಾಲಯದ ಅಧ್ಯಕ್ಷ ಸಿ.ವಿ.ಗೋಪಿನಾಥ್, ಉಪಾಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಅಶ್ವಥ್ ನಾರಾಯಣ್ ಇತರರು ಇದ್ದರು.