ಜಿಲ್ಲೆ

ನಿಷೇಧಿತ ಪ್ಲಾಸ್ಟಿಕ್ ಮಾರಾಟ ತಡೆಗೆ ಜನಸಂಗ್ರಾಮ ಪರಿಷತ್ತು ಆಗ್ರಹ

ಮೈಸೂರು: ನಿಷೇಧಿತ ಪ್ಲಾಸ್ಟಿಕ್ ನಗರದಲ್ಲಿ ಎಗ್ಗಿಲ್ಲದೆ ಮಾರಾಟವಾಗುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ಲಾಸ್ಟಿಕ್ ನಿಷೇಧ ಬಡ ವ್ಯಾಪಾರಿಗಳ ಮೇಲೆ ಗದಾಪ್ರಹಾರ ಮಾಡಲು ಬಳಕೆಯಾಗುತ್ತಿದೆ ಎಂದು ಜನಸಂಗ್ರಾಮ ಪರಿಷತ್ತಿನ ಪರಿಸರ ಚಿಂತಕ ರಮೇಶ್ ಕುಮಾರ್ ಮಾಲಿ ಆರೋಪಿಸಿದರು.
ಪ್ಲಾಸ್ಟಿಕ್ ಧ್ವಜ, ಫ್ಲೆಕ್ಸ್, ಎನ್‌ಯುಪಿ ಪ್ಲಾಸ್ಟಿಕ್ ಕಂಟೈನರ್, ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಲೇಪಿತ ಪೇಪರ್ ಕಪ್, ನಾನ್ ಒವೆನ್ ಕ್ಯಾರಿ ಬ್ಯಾಗ್ ಸೇರಿದಂತೆ ಇನ್ನಿತರ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟ ಎಗ್ಗಿಲ್ಲದೆ ವ್ಯಾಪಕವಾಗಿ ನಡೆಯುತ್ತಿವೆ. ಆದರೂ ಜಿಲ್ಲಾಡಳಿತ, ನಗರಪಾಲಿಕೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಮುಚ್ಚಿ ಕುಳಿತಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ತರಕಾರಿ ಅಂಗಡಿ, ದೊಡ್ಡ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗಾಗಿ ಪ್ಲಾಸ್ಟಿಕ್ ಕೋಟೆಡ್ ಪ್ಲೇಟ್ ಹಾಗೂ ಹಾಳೆಗಳನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕಾದ ಜಿಲ್ಲಾಡಳಿತ, ನಗರಪಾಲಿಕೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ. ಹೀಗಾಗಿ ಇದರ ವಿರುದ್ಧ್ಧ ಜನಸಂಗ್ರಾಮ ಪರಿಷತ್ ದೊಡ್ಡ ಮಟ್ಟದ ಹೋರಾಟ ರೂಪಿಸಲಿದೆ ಎಂದು ಹೇಳಿದರು.
ಜನಸಂಗ್ರಾಮ ಪರಿಷತ್ ರಾಜ್ಯ ಉಪಾಧ್ಯಕ್ಷ ಪ್ರಸನ್ನ ಮಾತನಾಡಿ, ದೇಶದಲ್ಲಿ ಪ್ಲಾಸ್ಟಿಕ್ ತಯಾರಿಕೆ, ಮಾರಾಟ ನಿಷೇಧ ಎಂದು ಸರ್ಕಾರವೇ ಹೇಳಿದ್ದರೂ ಗುಜರಾತಿನಿಂದ ದೊಡ್ಡ ದೊಡ್ಡ ಕಂಟೈನರ್‌ಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳು ರಾಜ್ಯಕ್ಕೆ ಬರುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಧೈರ್ಯ ನಮ್ಮ ಅಧಿಕಾರಿಗಳಿಗೆ ಇಲ್ಲ ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ಭೂ ಕಬಳಿಕೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಿರುವುದು ಭೂ ಕಬಳಿಕೆದಾರರು, ಭೂಗಳ್ಳರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತಿದೆ. ಅಲ್ಲದೆ, ಇದರಿಂದ ಅರಣ್ಯ ನಾಶವಾಗುವುದಲ್ಲದೆ, ಗ್ರಾಮೀಣ ಭಾಗದ ಪಶುಪಾಲಕರಿಗೆ, ಸಾಮಾಜಿಕ ಒಡೆತನದ ಕೆರೆ, ಕಟ್ಟೆಗಳಿಗೆ ಅಪಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಈ ತಿದ್ದುಪಡಿ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಜನಸಂಗ್ರಾಮ ಪರಿಷತ್ ನಿರ್ಧರಿಸಿದೆ ಎಂದು ತಿಳಿಸಿದರು.
ಕಾರ್ಯಕರ್ತರಾದ ನಗರ್ಲೆ ಎಂ.ವಿಜಯಕುಮಾರ್, ಗೀತಾ ವೇಲುಮಣಿ, ಕಂಸಾಳೆ ರವಿ, ರಾಘವೇಂದ್ರ ಕುಷ್ಟಗಿ ಇದ್ದರು.