ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಾರಾಟ ಮಾಡುತ್ತಿದ್ದ ನಿಷೇಧಿತ ಪಟಾಕಿಗಳನ್ನು ಅಧಿಕಾರಿಗಳ ತಂಡ ಭಾನುವಾರ ಸಂಜೆ ವಶಕ್ಕೆ ಪಡೆದುಕೊಂಡಿದೆ.
ಕಡ್ಡಾಯವಾಗಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ವರ್ತಕರಿಗೆ ಈಗಾಗಲೇ ಸೂಚನೆ ನೀಡಿದ್ದರು.
ಪಟಾಕಿಗಳ ಮಾರಾಟ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಉಪವಿಭಾಗಾಧಿಕಾರಿ ಎ.ಕಾರ್ತಿಕ್ ನೇತೃತ್ವದ ತಂಡ ನಿಷೇಧಿತ ಪಟಾಕಿಗಳನ್ನು ವಶಪಡಿಸಿಕೊಂಡು, ಸೂಕ್ತ ಕ್ರಮ ಜರುಗಿಸಿದೆ. ತಹಸೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮತ್ತಿತರ ಅಧಿಕಾರಿಗಳು ತಂಡದಲ್ಲಿ ಇದ್ದರು.
ಗ್ರಾಹಕರು ಹಸಿರು ಪಟಾಕಿಯನ್ನು ಖರೀದಿಸಬೇಕೆಂದು ಮನವಿ ಮಾಡಿರುವ ಜಿಲ್ಲಾಧಿಕಾರಿ, ನಿಷೇಧಿತ ಪಟಾಕಿಗಳ ಮಾರಾಟ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.