ಕೋಲಾರ: ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಶುಕ್ರವಾರ ವಿಧಾನ ಪರಿಷತ್ ಶಾಸಕರು ಶ್ರೀ ಎಂ.ಎಲ್.ಅನಿಲ್ ಕುಮಾರ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಂಜೂರಾಗಿರುವ ಅಂಗನವಾಡಿ ಕೇಂದ್ರಗಳೆಷ್ಟು. ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಸಹಾಯಕರು ಮತ್ತು ಕಾರ್ಯಕರ್ತೆಯರೆಷ್ಟಿದ್ದಾರೆ, ಹಾಗು ಏಷ್ಟು ಅಂಗನವಾಡಿ ಕೇಂದ್ರಗಳು ಸ್ವಂತ ಮತ್ತು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಶ್ನಿಸಿದರು.
ಕೋಲಾರ ಜಿಲ್ಲೆಯಲ್ಲಿ ಸುಮಾರು ೧೧೦೯ ಅಂಗನವಾಡಿ ಕೇಂದ್ರಗಳಿಗೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು ೮೮೨ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಕೋಲಾರ ಜಿಲ್ಲೆಯಲ್ಲಿ ೪೪೨ ಅಂಗನವಾಡಿ ಕೇಂದ್ರಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೪೨೧ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ, ಕೋಲಾರ ಜಿಲ್ಲೆಯಲ್ಲಿ ೩೪೩ ನಿವೇಶನಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೧೬೯ ನಿವೇಶನಗಳು ಲಭ್ಯವಿದ್ದು ಈ ಸ್ಥಳಗಳಲ್ಲಿ ಸ್ವಂತ ಕಟ್ಟಡಗಳನ್ನು ಕಟ್ಟಲು ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಸಹಾಯಕರು ಮತ್ತು ಕಾರ್ಯಕರ್ತೆಯರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ಮನವಿ ಮಾಡಿದರು.
ಅದರಂತೆ ಮಾನ್ಯ ಸಚಿವರು ಉತ್ತರಿಸಿ ಅಂಗನವಾಡಿ ಸ್ವಂತ ಕಟ್ಟಡಗಳನ್ನು ಕಟ್ಟಲು ನಿವೇಶನಗಳಿಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿಲಾಗಿದ್ದು ನಿವೇಶನಗಳು ಲಭ್ಯವಿರುವ ಸ್ಥಳಗಳಲ್ಲಿ ಹಂತ ಹಂತವಾಗಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುವೆವು.
ಗೃಹಲಕ್ಷ್ಮಿ ಯೋಜನೆಯ ಕಾರ್ಯಕ್ರಮವು ನಮ್ಮ ಇಲಾಖೆಯಿಂದ ಕೈಗೊಂಡಿರುವುದರಿಂದ ಸದ್ಯಕ್ಕೆ ಅನುದಾನದ ಕೊರತೆ ಇದ್ದು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು, ಸಿಬ್ಬಂದಿಯವರ ನೇಮಕಾತಿ ಕುರಿತು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವೆವು ಎಂದು ಸಚಿವರು ತಿಳಿಸಿದರು.