ಸಾಗರ ನಗರಸಭೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೋಪಾಲಕೃಷ್ಣ ಬೇಳೂರು, ಮೈತ್ರಿ ಪಾಟೀಲ್, ಸವಿತಾ ವಾಸು, ರಂಗಸ್ವಾಮಿ, ಎಚ್.ಕೆ.ನಾಗಪ್ಪ ಇತರರಿದ್ದರು. 
ಜಿಲ್ಲೆ

ನಿವೇಶನಗಳ ನಕಲಿ ಹಕ್ಕುಪತ್ರ ಸೃಷ್ಟಿ

ಸಾಗರ: ನಗರವ್ಯಾಪ್ತಿಯಲ್ಲಿ ನಕಲಿ ಹಕ್ಕುಪತ್ರ ಸೃಷ್ಟಿಸಿ ನಿವೇಶನ ಮಾರಾಟ ಮಾಡಿದ ದೂರುಗಳಿವೆ. ಇಂತಹ ಪ್ರಕರಣಗಳು ನನ್ನ ಗಮನಕ್ಕೆ ಬಂದರೆ ಅಕಾರಿಗಳ ವಿರುದ್ಧವೇ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ನಗರಸಭೆ ಸಭಾಂಗಣದಲ್ಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಕಲಿ ಹಕ್ಕುಪತ್ರ ಪ್ರಕರಣಗಳ ಕುರಿತು ಸಂಬಂಸಿದ ಸಚಿವರಿಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಲಾಗಿದೆ ಎಂದರು. ಸರ್ಕಾರಿ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿ ಮಾಡುತ್ತಾರೆ ಎಂದರೆ ಸಹಿಸಲು ಸಾಧ್ಯವಿಲ್ಲ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಇದೇ ಹೆಚ್ಚು ಚರ್ಚೆಯಾಗುತ್ತಿದೆ. ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ಹೇಳಲಾಗುತ್ತಿದ್ದು, ಇದನ್ನು ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದರು. ಮಂಡನೆ ಆಗದ ಲೆಕ್ಕಪತ್ರ: ಸಾಗರ ನಗರಸಭೆಯಲ್ಲಿ ಎರಡು ವಷರ್ದಿಂದ ಲೆಕ್ಕಪತ್ರ ಮಂಡಿಸಿಲ್ಲ. ಕೋಟ್ಯಂತರ ರೂ. ವಹಿವಾಟು ಇರುತ್ತದೆ. ಕಾಲಕಾಲಕ್ಕೆ ಲೆಕ್ಕಪತ್ರ ಮಂಡಿಸುವುದು ನಿಮ್ಮ ಕರ್ತವ್ಯ. ಲೋಪ ಮಾಡಿದ ಅಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ತಿಳಿಸಿದರು. ಕೆಲವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರು ಇರುವ ಹಿನ್ನೆಲೆಯಲ್ಲಿ ಅವರನ್ನು ಬೇರೆ ಕಡೆ ವರ್ಗಾಯಿಸಲಾಗುತ್ತದೆ. ಕೆಲಸ ಮಾಡದ ನೌಕರರಿಗೆ ನೋಟಿಸ್ ಕೊಡಿ ಎಂದು ಅಕಾರಿಗಳಿಗೆ ಸೂಚಿಸಿದರು. ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಜಿಲ್ಲಾಕಾರಿಗಳ ಕಚೇರಿಯ ನಗರಾಭಿವೃದ್ಧಿ ಕೋಶದ ಯೋಜನಾಕಾರಿ ರಂಗಸ್ವಾಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇದ್ದರು.

ಸ್ವಚ್ಛತೆಗೆ ಆದ್ಯತೆ ನೀಡಿ ನಗರ ಸ್ವಚ್ಛತೆ ನನಗೆ ಮುಖ್ಯ. ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ಬರುತ್ತಾರೆ. ಊರು ಗಬ್ಬೆದ್ದು ಹೋಗಿದ್ದರೆ ಕೆಟ್ಟ ಹೆಸರು ಬರುತ್ತದೆ. ಸ್ವಚ್ಛತೆ ಇಲ್ಲದಿರುವುದು ಕಂಡು ಬಂದರೆ ಸಂಬಂಧಪಟ್ಟ ಅಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಗರಸಭೆಗೆ ಉತ್ತಮ ಆದಾಯವಿದ್ದು ಜನರ ತೆರಿಗೆ ಹಣ ಸದ್ಬಳಕೆಯಾಗಬೇಕು ಎಂದು ಶಾಸಕರು ತಿಳಿಸಿದರು. ನೀರಿನ ಕಂದಾಯ 3 ಕೋಟಿ ರೂ. ಬಾಕಿ ನಗರದ ನಾಲ್ಕು ಭಾಗಗಳಲ್ಲೂ ಸಂತೆ ಮೈದಾನ ಮಾಡಲು ಸೂಕ್ತ ಸ್ಥಳ ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಮನೆ ಹಾಗೂ ನೀರಿನ ಕಂದಾಯವನ್ನು ಸಮರ್ಪಕವಾಗಿ ವಸೂಲಿ ಮಾಡಬೇಕು. ನೀರಿನ ಕಂದಾಯ 3 ಕೋಟಿ ರೂ. ಬಾಕಿ ಇದೆ. ಈ ಬಗ್ಗೆ ಮೊದಲು ಗಮನಹರಿಸಿ. ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಆಗಬಾರದು. ಕರ ವಸೂಲಿಗೆ ಸಮಯ ನಿಗದಿ ಮಾಡಿಕೊಳ್ಳಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಕಥೆ ಹೇಳಬೇಡಿ, ಕೆಲಸ ಮಾಡಿ ನಗರ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯಿಂದ ಕೆಲವೆಡೆ ಮನೆಗಳು ಬಿದ್ದಿದೆ. ನಗರಸಭೆಯಿಂದ ಈವರೆಗೆ ಪರಿಹಾರ ಕೊಟ್ಟಿಲ್ಲ. ಪರಿಹಾರ ಕೊಡಿ ಎಂದರೆ ಸುತ್ತೋಲೆ ತೋರಿಸಿ ಕಥೆ ಹೇಳಬೇಡಿ. ಮಾನವೀಯತೆ ದೃಷ್ಟಿಯಿಂದ ಯೋಚನೆ ಮಾಡಿ. ಸರ್ಕಾರದ ನೆರವು ಕೊಡಿಸಬೇಕಾದುದು ನಮ್ಮ ಜವಾಬ್ದಾರಿ. ತಕ್ಷಣ ಮೂರು ದಿನದೊಳಗೆ ಪರಿಹಾರ ಕೊಡಬೇಕು. ಬಡವರಿಗೆ ಸತಾಯಿಸಿದರೆ ಸುಮ್ಮನೆ ಇರಲ್ಲ. ಈ ಕುರಿತು ತಹಸೀಲ್ದಾರರಿಗೂ ಸೂಚಿಸಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಸಾಗರ ತಾಲೂಕಿನ ಸಂಗಳ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ ಬಿದ್ದಿರುವ ಘಟನೆ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣವನ್ನು ತನಿಖೆಗೆ ಒತ್ತಾಯಿಸಲಾಗುತ್ತದೆ. ಇದರ ಜತೆಗೆ ಘನತ್ಯಾಜ್ಯ ವಿಲೇವಾರಿ ಘಟಕ ಮಾಡಲು ಜಾಗ ಕೊಟ್ಟ ಸಂಗಳ, ಅಕ್ಕಿಮನೆ, ಹುಲ್ಲತ್ತಿ ಗ್ರಾಮಕ್ಕೆ ನಗರಸಭೆಯಿಂದ ರಸ್ತೆ ನಿರ್ಮಿಸಿಕೊಡಲು ಸೂಚಿಸಲಾಗಿದೆ ಎಂದರು. ನಗರೋತ್ಥಾನ ಕಾಮಗಾರಿ ಅಪೂರ್ಣ ನಗರೋತ್ಥಾನ ಕಾಮಗಾರಿ ಕೆಲವೆಡೆ ಅಪೂರ್ಣವಾಗಿದೆ. ಮಳೆಗಾಲ ಆರಂಭ ಆಗಿರುವುದರಿಂದ ರಸ್ತೆ ಡಾಂಬರೀಕರಣ ಕಾಮಗಾರಿ ನಿಲ್ಲಿಸಿ. ಕೆಲವು ಗುತ್ತಿಗೆದಾರರು ಕಾಮಗಾರಿ ಮುಗಿಸಿಲ್ಲ. ಇವರಿಂದ ಅನಗತ್ಯ ವಿಳಂಬವಾಗುತ್ತಿದೆ. ಕೆಲಸ ಮುಗಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಹೊಸ ಗುತ್ತಿಗೆದಾರರಿಗೆ ಕಾಮಗಾರಿ ಹಸ್ತಾಂತರಿಸಿ ಎಂದು ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್‌ಗೆ ನಾನು ಭೇಟಿ ನೀಡಿ ಸ್ವಚ್ಛತೆ, ಬೀದಿದೀಪ, ಸ್ಥಳೀಯ ಸಮಸ್ಯೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆಯುತ್ತೇನೆ. ಹಾಗೆ ಸಾಗರದ ನಾಗರಿಕರು ಎಲ್ಲೆಂದರಲ್ಲಿ ಕಸ ಬಿಸಾಡದೆ ನಗರಸಭೆಯ ವಾಹನಗಳಿಗೆ ಕಸವನ್ನು ತಂದು ಹಾಕಬೇಕು ಎಂದು ವಿನಂತಿಸಿದರು. ಕೆಲವರು ಚೀಲದಲ್ಲಿ ತುಂಬಿ ಕಸವನ್ನು ಗ್ರಾಮಾಂತರ ಪ್ರದೇಶಗಳಿಗೆ ತಂದು ಹಾಕುತ್ತಿದ್ದಾರೆ. ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಪೌರ ನೌಕರರಿಗೆ ವಸತಿಗೃಹ ನಿರ್ಮಿಸಿ ತರಕಾರಿ ಮಾರ್ಕೆಟ್ ಕಟ್ಟಡ ಶಿಥಿಲ ಆಗಿರುವುದರಿಂದ ನೆಲಸಮ ಮಾಡಿ ಹೊಸದಾಗಿ ನಿರ್ಮಿಸಬೇಕು. ಕೆಳಗೆ ತರಕಾರಿ ಮಾರಾಟಕ್ಕೆ ಮಳಿಗೆ ಮಾಡಿ, ಮೇಲ್ಭಾಗದಲ್ಲಿ ಪೌರನೌಕರರಿಗೆ ವಸತಿಗೃಹ ನಿರ್ಮಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮನವಿ ಮಾಡಿದರು. 41 ಪೌರಕಾರ್ಮಿಕರ ಕೊರತೆ ಇದ್ದು, ಹುದ್ದೆ ಭರ್ತಿ ಮಾಡಲು ಸರ್ಕಾರದ ಮೇಲೆ ಒತ್ತಡ ತರಬೇಕು. ನಗರವ್ಯಾಪ್ತಿಯಲ್ಲಿರುವ ನಗರಸಭೆಯ 151 ಮಳಿಗೆಗಳನ್ನು ದುರಸ್ತಿ ಮಾಡಿಸಿ ಸುಣ್ಣಬಣ್ಣ ಮಾಡಿಸಲು ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಆಡಳಿತ ಪಕ್ಷದ ಸದಸ್ಯರ ಗೈರು ಸಭೆಗೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರನ್ನು ಹೊರತುಪಡಿಸಿ ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ಗೈರಾದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸದಸ್ಯ ಗಣೇಶ್ ಪ್ರಸಾದ್, ಸಭೆಗೆ ನಮಗೆ ಆಗ ಅಕೃತವಾಗಿ ಆಹ್ವಾನ ನೀಡಿಲ್ಲ. ಬೆಳಗ್ಗೆ 10ಕ್ಕೆ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಪೂರ್ವಯೋಜಿತ ಕಾರ್ಯಕ್ರಮಗಳು ಇದ್ದುದರಿಂದ ಸಭೆಗೆ ಗೈರಾಗಿದ್ದೇವೆ. ಆದಾಗಿಯೂ ನಗರಸಭೆಗೆ ಸರ್ಕಾರದಿಂದ ಶಾಸಕರು ಯಾವುದೇ ಅನುದಾನವನ್ನು ಇಲ್ಲಿಯವರೆಗೂ ತಂದಿಲ್ಲ. ಅನುದಾನ ಬಾರದೆ ಇದ್ದ ಮೇಲೆ ಪ್ರಗತಿ ಸಭೆ ಔಚಿತ್ಯವೇನು ಎಂದು ಪ್ರಶ್ನಿಸಿದ್ದಾರೆ.