ಹುಬ್ಬಳ್ಳಿ: ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ನಿವೇಶನ ರಹಿತರಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ನಿವೇಶನ ರಾಜ್ಯ ರಹಿತರ ಹೋರಾಟ ಸಮಿತಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಮಹಿಳೆಯರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ನಿವಾಸದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
ನಿವೇಶನ ನೀಡುವಂತೆ ಆಗ್ರಹಿಸಿ ಈ ಹಿಂದೆ ಅವಳಿ ನಗರದ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಿವೇಶನ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಅವಳಿ ನಗರದಲ್ಲಿ ಸೂರು ಇಲ್ಲದವರನ್ನು ಗುರುತಿಸುವ ಕಾರ್ಯವಾಗಬೇಕು. ಅಗತ್ಯವಿದ್ದಲ್ಲಿ ಸರ್ಕಾರ ಖಾಸಗಿ ಜಾಗ ಖರೀದಿಸಿಯಾದರೂ ನಿವೇಶನ ಹಂಚಬೇಕು ಎಂದು ಒತ್ತಾಯಿಸಿದರು.
ಹುಡಾ ಹಾಗೂ ಗೃಹ ನಿರ್ಮಾಣ ಮಂಡಳಿ ಮೂಲಕ ಹಂಚುವ ನಿವೇಶನಗಳಲ್ಲಿ ಶೇ. 50ರಷ್ಟನ್ನು ಆರ್ಥಿಕ ವಾಗಿ ಹಿಂದುಳಿದವರಿಗೆ ಮೀಸಲಿಡುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಸಚಿವ ಜಗದೀಶ ಶೆಟ್ಟರ್, ಸಂಬಂಧಿಸಿದ ಅಧಿಕಾರಿಗಳೊಂದಿಗೆ ರ್ಚಚಿಸುವ ಭರವಸೆ ನೀಡಿದರು.
ಸಮಿತಿ ರಾಜ್ಯ ಸಂಚಾಲಕ ನಾಗರಾಜ ಗುರಿಕಾರ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ರಾಮಾಂಜನಪ್ಪ ಹಾಲದಹಳ್ಳಿ, ರಾಜು ಹಿರೇಒಡೆಯರ, ನೀಲಕಂಠ ಅಸೂಟಿ, ಕೆ.ಸಿ. ರಜಪೂತ, ನಾಗರಾಜ ನಾಡಕರ್ಣಿ, ಸಚ್ಚಿದಾನಂದ ರಾಯ್ಕರ್ ಮತ್ತಿತರರಿದ್ದರು.