ಜಿಲ್ಲೆ

ನಿವೇಶನ ಹಂಚಿಕೆಗೆ ನಕ್ಷೆ ಪತ್ತೆ ಕಾರ್ಯ

ಕೊಳ್ಳೇಗಾಲ : ಪಟ್ಟಣದ ನಾಯಕರ ಹೊಸ ಬಡಾವಣೆಯಲ್ಲಿ 1976- 77ರಲ್ಲಿ 10.1 ಎಕರೆ ಜಾಗದಲ್ಲಿ ನಿರಾಶ್ರಿತರಿಗೆ 261 ನಿವೇಶನ ಹಂಚಿಕೆಗೆ ಸಂಬಂಧಿಸಿದ ನಕ್ಷೆ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ನಗರಸಭೆ ಆಯುಕ್ತ ಎ.ರಮೇಶ್ ಹೇಳಿದರು.

ನಾಯಕರ ದೊಡ್ಡ ಬೀದಿಯಲ್ಲಿರುವ ನಿವೇಶನ ಸಂಖ್ಯೆ 15, ಅಸೆಸ್‌ಮೆಂಟ್ ನಂ.472ಕ್ಕೆ ಸಂಬಂಧಿಸಿದಂತೆ ವಾರಸುದಾರ ಲೇಟ್ ಶಿವರಾಮು ಪುತ್ರ ಎಸ್.ಲೋಕೇಶ್ ಅವರ ಮನವಿಯನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮವಹಿಸುವಂತೆ ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ಉಪ ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಬಿ.ಎಸ್.ಶ್ರೀಧರ್ ಫೆ.6 ರಂದು ಲಿಖಿತ ಪತ್ರದ ಮೂಲಕ ಸೂಚಿಸಿರುವ ಬಗ್ಗೆ ಅವರು ಮಾತನಾಡಿದರು.

ಪಟ್ಟಣದ ನಾಯಕರ ಹೊಸ ಬಡಾವಣೆಯಲ್ಲಿ 1976-77ರಲ್ಲಿ 10.1 ಎಕರೆ ಜಾಗದಲ್ಲಿ ನಿರಾಶ್ರಿತರಿಗೆ 261 ನಿವೇಶನವನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಲೇಟ್ ಶಿವರಾಂ ಪುತ್ರ ಲೋಕೇಶ್ ಅವರಿಗೆ ಸೇರಿದೆ ಎನ್ನಲಾದ ನಿವೇಶನ ಸಂಖ್ಯೆ 15 ಅಸೆಸ್‌ಮೆಂಟ್ ನಂ.472 ಅನ್ನು ಪತ್ತೆ ಹಚ್ಚಲೂ ಈಗಾಗಲೇ ತಹಸೀಲ್ದಾರ್ ಹಾಗೂ ಭೂದಾಖಲೆಗಳ ಸಹಾಯಕ ಅಧಿಕಾರಿಗಳಿಗೆ 1976-77ರಲ್ಲಿ 10.1 ಎಕರೆ ಜಾಗದಲ್ಲಿ ಹಂಚಿದ ಮನೆ ದಳಗಳ ಮಂಜೂರಾತಿ ಪತ್ರ ಹಾಗೂ ಬಡಾವಣೆಯ ನಕಾಶೆಯನ್ನು ನೀಡುವಂತೆ ಪತ್ರ ಬರೆಯಲಾಗಿದೆ.

ತಹಸೀಲ್ದಾರ್ ಬಸವರಾಜು ಹಾಗೂ ಕಂದಾಯ ಅಧಿಕಾರಿಗಳು ಸರ್ವೇ ನಡೆಸಿ 10.1 ಎಕರೆ ಜಾಗದ ಬೌಂಡರಿ ಫಿಕ್ಸ್ ಮಾಡಿದ್ದಾರೆ. ಆದರೆ, 1776-77 ರಲ್ಲಿ ಹಂಚಿರುವ 261 ನಿವೇಶನ ನಕಾಶೆಯ ವಿಚಾರದಲ್ಲಿ ಗೊಂದಲವಿದೆ. ಹಿಂದೆ ಮೈಸೂರು ತಾಲೂಕಿಗೆ ಕೊಳ್ಳೇಗಾಲ ಸೇರಿದ್ದಾಗ ಈ ನಿವೇಶನ ಹಂಚಿಕೆ ಆಗಿರುವುದು. ಈಗಾಗಲೇ ಸೈಟ್‌ಗಳ ನಕಾಶೆ ತಹಸೀಲ್ದಾರ್ ಕಚೇರಿಯಲ್ಲೂ ಇಲ್ಲ. ನಮ್ಮ ಬಳಿ ನಿವೇಶನ ಹಂಚಿಕೆಗೆ ಸಂಬಂಧಿಸಿದ 3 ಪ್ರತ್ಯೇಕ ನಕಾಶೆಗಳಿವೆ. ಆದರೆ, ಈ ಮೂರು ನಕಾಶೆಯಲ್ಲಿ ಯಾವ ನಕಾಶೆಯಲ್ಲಿ ಸೈಟ್ ಹಂಚಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಗೊಂದಲವಾಗಿದೆ. ಸೈಟ್‌ಗಳ ಹಂಚಿಕೆಗೆ ಸಂಬಂಧಿಸಿದ ಯಾವ ನಕಾಶೆ ಸರಿ ಎಂಬುದನ್ನು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.