ಮೈಸೂರು: ನಿವೇಶನ ಖರೀದಿಯಲ್ಲಿ ಜನರಿಗೆ ಆಗುತ್ತಿರುವ ಮೋಸ ತಡೆಗೆ ಕೇಂದ್ರ ಸರ್ಕಾರ ಮಹತ್ವದ ರೇರಾ ಕಾಯ್ದೆ ಜಾರಿಗೊಳಿಸಿದೆ ಎಂದು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಜಂಟಿ ಕಾರ್ಯದರ್ಶಿ ಈ. ಶಿವರುದ್ರಪ್ಪ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಖಾಸಗಿ ರೆಸಾರ್ಟ್ ನಲ್ಲಿ ಮಂಗಳವಾರ ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ರೇರಾ ಕಾಯ್ದೆ ಕುರಿತು ಮಾತನಾಡಿ, ನಿವೇಶನ ಖರೀದಿಯಲ್ಲಿ ಮೋಸವಾದರೂ ಈ ಹಿಂದೆ ಯಾರಿಗೆ ದೂರು ನೀಡಬೇಕು ಎಂಬ ಗೊಂದಲ ಇತ್ತು. ಹೀಗಾಗಿ ನಿವೇಶನ ಖರೀದಿದಾರರು ಸೂಕ್ತ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ರೇರಾ ಕಾಯ್ದೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಗ್ರಾಹಕರ ಹಿತ ಕಾಯುವ ಕಾರ್ಯ ನಡೆಯುತ್ತಿದೆ ಎಂದರು.
ವಸತಿ ಬಡಾವಣೆ ನಿರ್ಮಾಣ ಮಾಡುವವರು ಕಡ್ಡಾಯವಾಗಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನಿರ್ದಿಷ್ಟ ಬಡಾವಣೆ ಯೋಜನೆಯನ್ನು ನೋಂದಣಿ ಮಾಡಬೇಕು. ಬಡಾವಣೆ ನಿರ್ಮಿಸುವವರು ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಎಲ್ಲ ರೀತಿಯ ಮೂಲಸೌಲಭ್ಯ ಕಲ್ಪಿಸಬೇಕು, ಯಾವುದೇ ರೀತಿಯ ಲೋಪ ಮಾಡಿದರೆ ಸಂಬಂಧಿಸಿದ ಗೃಹ ನಿರ್ಮಾಣ ಸಹಕಾರ ಸಂಘಗಳು, ಬಿಲ್ಡರ್ಸ್‌ಗಳ ವಿರುದ್ಧ ಪ್ರಾಧಿಕಾರಕ್ಕೆ ಗ್ರಾಹಕರು ದೂರು ನೀಡಬಹುದು. ಪ್ರಾಧಿಕಾರದಲ್ಲಿ ನ್ಯಾಯಾಲಯ ಇದ್ದು, ಈ ನ್ಯಾಯಾಲಯಕ್ಕೆ ಸಿವಿಲ್ ನ್ಯಾಯಾಲಯ ಸರಿಸಮನಾದ ಅಧಿಕಾರ ಇದೆ. ಈ ನ್ಯಾಯಾಲಯದಲ್ಲಿ ನೀಡುವ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು ಸಹ ಅವಕಾಶವಿದೆ ಎಂದು ಹೇಳಿದರು.
ಇದುವರೆಗೆ ರಾಜ್ಯದಲ್ಲಿ ಒಟ್ಟು 6 ಸಾವಿರ ಬಡಾವಣೆಗಳ ಯೋಜನೆಗಳು ಪ್ರಾಧಿಕಾರದಲ್ಲಿ ನೋಂದಣಿಯಾಗಿದೆ. ಬಡಾವಣೆ ನಿರ್ಮಾ ಣಕ್ಕೆ ನಕ್ಷೆಗೆ ಅನುಮೋದನೆ ಪಡೆದ ತಕ್ಷಣವೇ ಪ್ರಾಧಿಕಾರದಲ್ಲಿ ಯೋಜನೆಯನ್ನು ನೋಂದಾಯಿಸಬೇಕು. ನೋಂದಾವಣೆ ಮಾಡಿದ 2 ವರ್ಷಗಳ ಒಳಗೆ ನಿವೇಶನ ಹಂಚಿಕೆ ಮಾಡಬೇಕು. ಒಂದುವೇಳೆ ಈ ಅವಧಿಯೊಳಗೆ ಸಾಧ್ಯವಾಗದೆ ಇದ್ದರೆ ಮತ್ತೆ ಹೆಚ್ಚುವರಿ 1 ವರ್ಷ ಅವಧಿ ನೀಡಲಾಗುವುದು. ಆ ಅವಧಿಯಲ್ಲೂ ನಿವೇಶನ ಹಂಚಿಕೆ ಸಾಧ್ಯವಾಗದೆ ಇದ್ದರೆ ಸಮರ್ಥ ಕಾರಣವನ್ನು ಪ್ರಾಧಿಕಾರಕ್ಕೆ ಲಿಖಿತವಾಗಿ ನೀಡಿ ಹೆಚ್ಚುವರಿ ಅವಧಿ ಪಡೆಯಬಹುದು. ಒಂದುವೇಳೆ ನೋಂದಣಿ ಮಾಡಿಸದೆ ಬಡಾವಣೆ ನಿರ್ಮಾಣ ಮಾಡಿದರೆ ಯೋಜನಾ ಮೊತ್ತದ ಶೇ.10 ರಷ್ಟು ದಂಡ ವಿಧಿಸಲಾಗುವುದು. ಈಗಾಗಲೇ ಕೆಲವು ಸಂಘಗಳಿಗೆ ದಂಡ ವಿಧಿಸಲಾಗಿದೆ ಎಂದು ಎಚ್ಚರಿಸಿದರು.
ಒಂದು ಎಕರೆಯಲ್ಲಿ ಬಡಾವಣೆ ಮಾಡಿದರೆ ಅಂತಹ ಸಂಘದವರು ಪ್ರಾಧಿಕಾರದಲ್ಲಿ ಯೋಜನೆಯನ್ನು ನೋಂದಣಿ ಮಾಡಿಸುವುದು ಕಡ್ಡಾಯವಲ್ಲ. ಆದರೆ, ಅಂತಹ ಬಡಾವಣೆ ಯೋಜನೆಯಲ್ಲಿ ಮೋಸ ಆದರೆ ರೇರಾ ಕಾಯ್ದೆಯಡಿ ದೂರು ನೀಡಬಹುದು. ರೇರಾ ಕಾಯ್ದೆಯಡಿ ನೋಂದಣಿ ಆಗದೆ ಇದ್ದರೆ ಸಂಬಂಧಿಸಿದ ಬಡಾವಣೆಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಸಹ ಸಿಗುವುದಿಲ್ಲ ಎಂದು ಹೇಳಿದರು.
ಬಡಾವಣೆ ನಿರ್ಮಾಣಕ್ಕೆ ಸಂಘಗಳು ಸದಸ್ಯರಿಂದ ಮುಂಗಡ ಹಣವನ್ನು ಸಂಗ್ರಹಿಸಲು ಅವಕಾಶವಿದ್ದು, ಈ ರೀತಿ ಸಂಗ್ರಹಿಸುವ ಹಣದಲ್ಲಿ ಶೇ.70 ರಷ್ಟು ಹಣವನ್ನು ಬಡಾವಣೆ ಅಭಿವೃದ್ಧಿಗೆ ಬಳಸಬೇಕು. ಸೇಲ್ ಅಗ್ರಿಮೆಂಟ್ ಆಗುವವರೆಗೆ ಶೇ.10 ರಷ್ಟು ಮಾತ್ರ ಮುಂಗಡ ಹಣ ಪಡೆಯಲು ಅವಕಾಶವಿದೆ ಎಂದು ಹೇಳಿದರು.
ಸದಸ್ಯರಿಂದ ಹಣ ಪಡೆದು ನಿಗದಿತ ಅವಧಿಯೊಳಗೆ ನಿವೇಶನ ನೀಡದೆ ಹೋದರೆ ಸಂಬಂಧಿಸಿದ ಸಂಘದವರು ಬ್ಯಾಂಕ್ ಬಡ್ಡಿಯ ಜತೆಗೆ ಶೇ.2 ಬಡ್ಡಿಯನ್ನು ಸೇರಿಸಿ ನೀಡಬೇಕು. ಅದೇ ರೀತಿ ನಿವೇಶನ ನೀಡಲು ಸಂಘ ಸಿದ್ಧವಿದ್ದರೂ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿಸದ ಸದಸ್ಯರು ಸಂಘಕ್ಕೆ ಬಡ್ಡಿ ಸಹಿತ ಹಣ ನೀಡುವುದು ಅನಿವಾರ್ಯ. ಬಡಾವಣೆ ಸಂಪೂರ್ಣ ಅಭಿವೃದ್ಧಿಗೊಂಡರೂ ಒಂದುವೇಳೆ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಬಿಡುಗಡೆ ಮಾಡಲು ವಿಳಂಬ ಮಾಡಿದರೆ ಅಂತಹ ವಿಳಂಬಕ್ಕೆ ಸಂಘಗಳು ಹೊಣೆಯಾಗುವುದಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ರಾಜ್ಯ ಸಹಕಾರ ವಸತಿ ಮಹಾಮಂಡಳ ನಿರ್ದೇಶಕ ಡಾ.ಎಂ.ಬಿ. ಮಂಜೇಗೌಡ, ಕೆಐಸಿಎಂ ಪ್ರಾಂಶುಪಾಲ ಚಂದ್ರಶೇಖರ್, ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ವಿಶ್ವೇಶ್ವರಯ್ಯ, ನಿರ್ದೇಶಕರಾದ ಭೈರಪ್ಪ, ಪ್ರಶಾಂತ್ ತಾತಾಚಾರ್, ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಎ. ಜತಿನ್ ಕ್ರಿಸ್ಟೋಫರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೃತ್ತ ನಗರ ಯೋಜನಾ ಸದಸ್ಯ ಜಯಸಿಂಹ ಹಾಗೂ ಇತರರು ಇದ್ದರು.