ಜಿಲ್ಲೆ

ನಿವೇಶನ ಒದಗಿಸುವಂತೆ ಆಗ್ರಹ: ಕೊಳಗೇರಿ ನಿವಾಸಿಗಳಿಂದ ಡಿ.ಸಿ. ಕಚೇರಿ ಎದುರು ಪ್ರತಿಭಟನೆ

Tumakuru

ತುಮಕೂರು: ನಗರದ ವಿವಿಧ ಕೊಳಗೇರಿಗಳಲ್ಲಿ 400 ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಒದಗಿಸಲು 5ಎಕರೆ ಸರ್ಕಾರಿ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕೊಳಗೇರಿ ನಿವಾಸಿಗಳ ಸಮಿತಿ ಮತ್ತು ನಿವೇಶನ ರಹಿತರ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಿರಂತರ ಪ್ರತಿಭಟನೆ ಆರಂಭಿಸಿದರು.

ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ ಮನವಿ ಸ್ವೀಕರಿಸಿ, ನಿವೇಶನ ರಹಿತ ಸ್ಲಂ ನಿವಾಸಿಗಳಿಗೆ ಭೂಮಿ ನೀಡಲು ಜಿಲ್ಲಾಡಳಿತ ಸಕಾರಾತ್ಮಕವಾಗಿದೆ ಎಂದು ಭರವಸೆ ನೀಡಿದರು.

ಹೆಬ್ಬಾಕ ಸರ್ವೇ ನಂ.70ರಲ್ಲಿರುವ 3 ಎಕರೆ ಸರ್ಕಾರಿ ಗೋಮಾಳ, ನರಸಾಪುರ ಸರ್ವೇ ನಂಬರ್​ 54ರಲ್ಲಿರುವ 9 ಎಕರೆ ಸರ್ಕಾರಿ ಗೋಮಾಳದಲ್ಲಿ ನಿವೇಶನ ರಹಿತ ಸ್ಲಂ ನಿವಾಸಿಗಳಿಗೆ ನಿವೇಶನ ನೀಡಬಹುದಾಗಿದೆ ಎಂದು ವೈ.ಎಸ್​.ಪಾಟೀಲ ತಿಳಿಸಿದರು.

ಈಗಾಗಲೇ ನಗರಪಾಲಿಕೆಗೆ ನಿವೇಶನ ರಹಿತರಿಗೆ ಹಸ್ತಾಂತರಿಸಿರುವ 15.13 ಎಕರೆ ಭೂಮಿಯಲ್ಲಿ ನಿರ್ಮಿಸುವ ವಸತಿ ಸಮುಚ್ಛಯಗಳಲ್ಲಿ ವಿಶೇಷ ಆದ್ಯತೆಯ ಮೇಲೆ 400 ಕುಟುಂಬಗಳನ್ನು ಪರಿಗಣಿಸಲು ಆಶ್ರಯ ಸಮಿತಿಗೆ ಕೋರಲಾಗುವುದು ಎಂದರು.

ಜೂ.8ರಂದು ಸಂಬಂಧಪಟ್ಟ ಇಲಾಖೆಗಳ ಸಭೆ ಕರೆದಿದ್ದು, ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಿದ್ದೇವೆ ಹಾಗಾಗಿ, ನಿರಂತರ ಧರಣಿ ಕೈಬಿಡಿ ಎಂದು ಮನವಿಗೆ ಒಪ್ಪಿ ಪ್ರತಿಭಟನೆ ವಾಪಸ್​ ಪಡೆಯಲು ತೀರ್ಮಾನಿಸಲಾಯಿತು.

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಭಾರತಿನಗರ ಭಾಗ&2, ಸ್ಲಂ ೂಷಣೆ ಮಾಡಬೇಕು ಮತ್ತು ಸಂಪಾಧನೆಮಠ ಕೊಳಚೆ ಪ್ರದೇಶಕ್ಕೆ ಬೀದಿದೀಪ, ವಿದ್ಯುತ್​ ದೀಪ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ಮುಖಂಡ ಸೈಯದ್​ ಮುಜೀಬ್​ ಮಾತನಾಡಿ, ನಗರದಲ್ಲಿ 20ಸಾವಿರಕ್ಕೂ ಹೆಚ್ಚು ನಿವೇಶನ ರಹಿತರಿದ್ದು 20 ವರ್ಷಗಳಿಂದ ನಿವೇಶನ ಹಂಚಿಕೆಯಾಗಿಲ್ಲ. ಇತ್ತೀಚೆಗೆ ನಗರ ಪಾಲಿಕೆಯಿಂದ ಅರ್ಹ ಪಲಾನುಭವಿಗಳ ಸಮೀೆಯಲ್ಲಿ ಒಂದು ಸಮುದಾಯವನ್ನು ಹೊರಗಿಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಖಂಡರಾದ ಕಣ್ಣನ್​, ಶಂಕ್ರಯ್ಯ, ಹಯಾತ್​ಸಾಬ್​, ಅರುಣ್​, ತಿರುಮಲಯ್ಯ, ಜಾಬೀರ್​ಖಾನ್​, ಮುನೀರ್​, ಚಕ್ರಪಾಣಿ, ರಂಗನಾಥ್​, ಪುಟ್ಟರಾಜು, ಗುಲ್ನಾಜ್​, ದನಂಜಯ್​ ಮತ್ತಿತರರು ಇದ್ದರು.