ನಾಗಮಂಗಲ: ವಯೋನಿವೃತ್ತಿಯಾಗುತ್ತಿದ್ದಂತೆ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ನಿವೃತ್ತಿ ಹೊಂದಿದ ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ರವೀಂದ್ರ ಅವರಿಗೆ ಅಭಿನಂದನೆ ಸಲ್ಲಿಸಲು ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸೇವೆ ಅಥವಾ ಕರ್ತವ್ಯದಿಂದ ನಿವೃತ್ತಿಯ ನಂತರ ನಮ್ಮನ್ನು ನಾವು ಇಷ್ಟದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿದ್ದರೆ ಕಿರಿಕಿರಿಗಳು ಉಂಟಾಗುತ್ತವೆ. 60 ವರ್ಷದ ನಂತರ ಜ್ಞಾನ ಮತ್ತು ವಿಷಯ ಸಂಗ್ರಹಣೆ ಹೆಚ್ಚು ಮಾಡಿಕೊಳ್ಳಬೇಕು. ಆ ರೀತಿಯಲ್ಲಿ ನಡೆದಾಗ ಮಾತ್ರ ಕುಟುಂಬ, ಸಮಾಜಕ್ಕೆ ನಾವು ಹೊರೆ ಆಗುವುದಿಲ್ಲ ಎಂದರು.
ಯಾವ ವ್ಯಕ್ತಿಗೆ ತನ್ನ ಕರ್ತವ್ಯದ ಬಗ್ಗೆ ಬದ್ಧತೆ ಹೊಂದಿರುತ್ತಾನೋ ಆತ ಸಮಾಜದಲ್ಲಿ ಎತ್ತರಕ್ಕೆ ಬೆಳೆಯುತ್ತಾನೆ. ಅಂತಹ ವ್ಯಕ್ತಿ ತಾನು ಬೆಳೆಯುವ ಜತೆಗೆ ಸಮುದಾಯದ ಇತರರನ್ನೂ ಬೆಳೆಸುತ್ತಾನೆ. ಅಂತಹ ಸಂದರ್ಭದಲ್ಲಿ ಸಮಾಜ ಗುರುತಿಸಿ ಗೌರವಿಸುತ್ತದೆ. ನಿವೃತ್ತಿಯ ನಂತರ ಸಮಾಜದ ಸೇವೆ ಮಾಡಲು ಹಲವು ಅವಕಾಶಗಳಿವೆ. ನಮಗೆ ಕೆಲಸ ಇಲ್ಲ ಎನ್ನುವಂತಿಲ್ಲ. ಕೆಲಸ ಮಾಡುವವರಿಗೆ ಮಾಡಲು ಹಲವು ಕೆಲಸ ಕಾಯುತ್ತಿರುತ್ತವೆ. ಮಿತಿ ಮೀರಿದ ವಿಶ್ರಾಂತಿ ಎಂಬುದು ನಮ್ಮ ಬದುಕನ್ನು ವಿನಾಶಕ್ಕೆ ತಳ್ಳುತ್ತದೆ ಎಂದು ಸ್ವಾಮೀಜಿ ಹೇಳಿದರು. ಡಾ. ರವೀಂದ್ರ ಅವರು ಸೌಜನ್ಯ ಹಾಗೂ ಸೃಜನಶೀಲ ವ್ಯಕ್ತಿ. ಅವರ ನಿವೃತ್ತ ಜೀವನ ಇತರರಿಗೂ ಮಾದರಿ ಆಗಲಿದೆ ಎಂದು ಸ್ವಾಮೀಜಿ ಆಶಿಸಿದರು.
ಪ್ರಾಂಶುಪಾಲ ಡಾ.ರವೀಂದ್ರ ಅವರನ್ನು ಹಿರಿಯ ವಿದ್ಯಾರ್ಥಿ ಸಂಘ, ಗೆಳೆಯರ ಬಳಗ ಮತ್ತು ಕಾಲೇಜು ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಿಇಒ ಡಾ.ಎನ್.ಎಸ್.ರಾಮೇಗೌಡ, ಆದಿಚುಂಚನಗಿರಿ ವಿವಿ ರಿಜಿಸ್ಟಾರ್ ಚಂದ್ರೇಗೌಡ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಕೆಂಪೇಗೌಡ, ಮುಖಂಡ ಎಚ್.ಟಿ.ಕೃಷ್ಣೇಗೌಡ ಮತ್ತಿತರರಿದ್ದರು.