ಜಿಲ್ಲೆ

ನಿವೃತ್ತಿ ವೇತನಕ್ಕೆ ಆಗ್ರಹಿಸಿ ಧರಣಿ

ಚಿತ್ರದುರ್ಗ: ಇಲಾಖಾ ನೌಕರರಿಗೆ ಸಮನಾಗಿ ಗ್ರಾಮೀಣ ಅಂಚೆ ನೌಕರರಿಗೂ ಅಗತ್ಯ ಸೌಲಭ್ಯ, 8 ಗಂಟೆ ಕೆಲಸ, ನಿವೃತ್ತಿ ವೇತನ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ, ಎನ್‌ಯುಜಿಡಿಎಸ್ ಸಂಘ ಚಿತ್ರದುರ್ಗ ವಿಭಾಗದ ಪದಾಧಿಕಾರಿಗಳು, ನೌಕರರು ಗುರುವಾರವೂ ಪ್ರತಿಭಟನೆ ನಡೆಸಿದರು.

ಕೋಟೆನಗರಿಯ ಪ್ರಧಾನ ಅಂಚೆ ಕಚೇರಿ ಮುಂಭಾಗ ಮುಂದುವರೆಸಿರುವ ಅನಿರ್ದಿಷ್ಟಾವಧಿ ಧರಣಿ 4ನೇ ದಿನಕ್ಕೆ ಕಾಲಿಟ್ಟಿದ್ದು, ಹೊಸದುರ್ಗ, ಚಳ್ಳಕೆರೆಯ ಉಪ ಅಂಚೆ ಕಚೇರಿ ಮುಂಭಾಗವೂ ಪ್ರತಿಭಟಿಸಿದರು. ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಗ್ರಾಮೀಣ ಅಂಚೆ ನೌಕರರ ಪಾತ್ರ ಅನನ್ಯ. ಆದರೆ, ಈ ಹಿಂದೆ ನವದೆಹಲಿಯಲ್ಲಿ ಧರಣಿ ನಡೆಸಿದ ವೇಳೆ ಇಲಾಖೆಯ ಉನ್ನತಾಧಿಕಾರಿಗಳು ಭರವಸೆ ನೀಡಿ ವಂಚಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ಟಿಆರ್‌ಸಿಎ ವೇತನ ಪರಿಷ್ಕರಿಸಿ 2016 ಜ. 1ರಿಂದ ಅದರಂತೆ ಪಾವತಿಸಬೇಕು. 12, 24, 36 ವರ್ಷಗಳ ಸೇವೆ ಸಲ್ಲಿಸಿದವರಿಗೆ ಹೆಚ್ಚುವರಿ ಇಂಕ್ರಿಮೆಂಟ್, 1.5 ಲಕ್ಷ ರೂ. ಬದಲಿಗೆ ಕೊನೆಯ ತಿಂಗಳ ವೇತನದ ಶೇ 16.5ರಷ್ಟು ನೀಡಬೇಕು. ಜಿಡಿಎಸ್ ನೌಕರರು ಮತ್ತು ಕುಟುಂಬದವರಿಗೆ ಆರೋಗ್ಯ ವಿಮೆ, ಉಳಿಕೆ ಗ್ರಾಜ್ಯುಟಿಯನ್ನು ವೇತನ ಸಹಿತ ನೀಡುತ್ತಿರುವ ರಜೆಯನ್ನು 180 ದಿನದವರೆಗೂ ಕೂಡಿಟ್ಟುಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

‘ಎ’ ಗ್ರೂಪ್ ವಿಮೆಯನ್ನು 5 ಲಕ್ಷ ರೂ.ಗೆ ಹೆಚ್ಚಿಸಬೇಕು. ಎಸ್‌ಡಿಬಿಎಸ್ ಯೋಜನೆಯಡಿ ಶೇ 3ರಿಂದ 10ರವರೆಗೂ ಹೆಚ್ಚಿಸಿ ನಿವೃತ್ತಿ ವೇತನ ನೀಡಬೇಕು. ಐಪಿಪಿಬಿ, ಆರ್‌ಪಿಎಲ್‌ಐ ಕಾರ್ಯಕ್ಕೆ ನೀಡುತ್ತಿರುವ ಪ್ರೋತ್ಸಾಹಧನ ರದ್ದುಗೊಳಿಸಿ, ಕೆಲಸದ ಹೊರಗೆ ಸೇರಿಸಬೇಕು. ನೂತನವಾಗಿ ನೇಮಕವಾದ ನೌಕರರಿಗೆ ಕೆಲಸದ ಹೊರೆ ಆಧರಿಸಿ ವೇತನ ನಿಗದಿಗೊಳಿಸಬೇಕು. ಬಿಒಗಳಿಗೆ ಲ್ಯಾಪ್‌ಟಾಪ್, ಪ್ರಿಂಟರ್, ಬ್ರಾಡ್‌ಬ್ಯಾಂಡ್ ಸೌಲಭ್ಯ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.

ಎಐಜಿಡಿಎಸ್‌ಯು ಅಧ್ಯಕ್ಷ ಡಿ.ಲೋಕೇಶ್ವರ್, ಖಜಾಂಚಿ ಎಚ್.ಬಿ.ವಿಜಯ್‌ಕುಮಾರ್, ಕಾರ್ಯದರ್ಶಿ ಎಂ.ಕೆ.ದಾದಾಪೀರ್, ಗೌರವಾಧ್ಯಕ್ಷರಾದ ಬಿ.ಎಚ್.ಜನಾರ್ದನ್, ಆರ್.ಪ್ರಕಾಶ್, ಎನ್‌ಯುಜಿಡಿಎಸ್ ಅಧ್ಯಕ್ಷ ಎನ್.ಅಜಯ್‌ಕುಮಾರ್, ಕಾರ್ಯಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಖಜಾಂಚಿ ಕೆ.ಎಸ್.ರಾಜು, ಕಾರ್ಯದರ್ಶಿ ಜಿ.ಕೆ.ಪಾಂಡುರಂಗರೆಡ್ಡಿ, ಗೌರವಾಧ್ಯಕ್ಷ ಸಣ್ಣಬೋರಯ್ಯ, ನಮಿತಾ, ವೀಣಾ, ಶಿಲ್ಪಾ, ದಿವ್ಯಾ, ಬಿ.ಟಿ.ಶಾಂತಕುಮಾರ್, ತುಕರಾಂ, ಪರಮೇಶ್ವರಪ್ಪ, ಸುದೀರ್, ಚಂದ್ರಶೇಖರಪ್ಪ, ತಿಮ್ಮಣ್ಣ ಇತರರಿದ್ದರು.