ಶನಿವಾರಸಂತೆ: ಸಮೀಪದ ಒಡೆಯನಪುರ ಸೌಹಾರ್ದಯುತ ಯುವಕರ ಬಳಗ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಒಡೆಯನಪುರ ಗ್ರಾಮದ ನಿವೃತ್ತ ಸೈನಿಕರು, ಶಿಕ್ಷಕರನ್ನು ಸನ್ಮಾನಿಸಲಾಯಿತು.
ಒಡೆಯನಪುರ ಗ್ರಾಮದ ಕ್ಯಾಪ್ಟನ್ ವಿ.ಕೆ.ಯಶವಂತ್ ಕುಮಾರ್ ಅವರನ್ನು ಶನಿವಾರಸಂತೆ ಕೆಆರ್‌ಸಿ ವೃತ್ತದಿಂದ ಸ್ವಾಗತಿಸಿದ ಯುವಕರ ಬಳಗದವರು ತೆರೆದ ವಾಹನದಲ್ಲಿ ಬೈಕ್ ರ‌್ಯಾಲಿಯೊಂದಿಗೆ ಮೆರವಣಿಗೆ ಮೂಲಕ ಅವರನ್ನು ಒಡೆಯನಪುರ ಗ್ರಾಮಕ್ಕೆ ಬರಮಾಡಿಕೊಂಡರು.
ನಿವೃತ್ತ ಶಿಕ್ಷಕ ಸಿ.ಎಲ್.ಸುಬ್ಬಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿವೃತ್ತ ಸೈನಿಕರು ಮತ್ತು ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಯುವ ಸಮುದಾಯಕ್ಕೆ ಮಾದರಿಯಾಗುವ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಕ್ಯಾಪ್ಟನ್ ಯಶವಂತ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ಉಪನ್ಯಾಸಕ ಕೆ.ಪಿ.ಜಯಕುಮಾರ್, ಬಳಗದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.