ಅಳವಂಡಿ (ಕೊಪ್ಪಳ) : ಸೈನಿಕರು ತಮ್ಮ ಜೀವನವನ್ನು ಪಣವಾಗಿಟ್ಟು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವದರಿಂದ ನಾವಿಂದು ದೇಶದಲ್ಲಿ ಸಂತೋಷದಿಂದ ಬದುಕುತ್ತಿದ್ದೇವೆ ಎಂದು ಪ್ರಾಚಾರ್ಯೆ ವಿಜಯಲಕ್ಷ್ಮೀ ಹಿರೇಮಠ ತಿಳಿಸಿದರು.
ಸಮೀಪದ ಗುಡಗೇರಿ ಗ್ರಾಮದಲ್ಲಿ ದೇಶಕ್ಕಾಗಿಯೇ ತಮ್ಮ ಜೀನವನವನ್ನು ಮುಡುಪಾಗಿಟ್ಟು ಗಡಿಯಲ್ಲಿ ಹಗಲಿರುಳು ಸೇವೆಗೈದು ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ನಿವೃತ್ತ ಸೈನಿಕ ನಾಗಬಸಯ್ಯ ಅವರ ಸನ್ಮಾನ ಹಾಗೂ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.
ಇದಕ್ಕೂ ಮೊದಲು ಸೈನಿಕ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಹೋಮಳೆಗೈಯುತ್ತಾ, ಪಟಾಕಿ ಸಿಡಿಸುತ್ತಾ, ಡಿಜೆ ಮೇಳಕ್ಕೆ ಕುಣಿದು ಕುಪ್ಪಳಿಸುತ್ತಾ ಅದ್ದೂರಿಯಿಂದ ಸ್ವಾಗತಿಸಿದರು. ನಂತರ ನಿವೃತ್ತ ಹಾಗೂ ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ಸನ್ಮಾನಿಸಲಾಯಿತು.
ರೈತ ಸಂಘದ ಮುಖಂಡ ಪಂಚಯ್ಯ ಕುರ್ತಕೋಟಿ ಮಾತನಾಡಿ, ಯುವಕರು ದೇಶಸೇವೆ ಸಲ್ಲಿಸಲು ಮುಂದೆ ಬರಬೇಕು. ಇದು ಹೆಮ್ಮೆಯ ಕೆಲಸ. ಸೈನಿಕರು ಕೇವಲ ಗಡಿ ಕಾಯುವ ಕೆಲಸದ ಜೊತೆಗೆ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿಯೂ ನಿಶ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸಮಾಜ ಸದಾ ಋಣಿಯಾಗಿರಬೇಕು. ರೈತ ಇಡಿ ದೇಶಕ್ಕೆ ಅನ್ನ ನೀಡಿದರೆ, ಸೈನಿಕ ದೇಶ ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಿದ್ದಾನೆ. ಇವರಿಬ್ಬರೂ ದೇಶದ ಬೆನ್ನೆಲುಬು ಎಂದರು.
ಪ್ರಮುಖರಾದ ಸುರೇಶಗೌಡ, ಶರಣಪ್ಪಗೌಡ, ಸಿದ್ದು, ರವಿ, ಕೆಲೋಡೆಪ್ಪ, ಸುರೇಶ, ವೆಂಕಪ್ಪ, ಮುತ್ತಯ್ಯ, ಬಸವರಾಜ, ತಹಶಿಲ್ದಾರ, ನಾಗರಾಜ, ಲಕ್ಷ್ಮಣ, ಹನುಮಂತ, ಶೇಖರಯ್ಯ, ಶ್ರೀಕಾಂತ, ಶಾಂತಮ್ಮ, ಶ್ರೀದೇವಿ, ವೆಂಕಣ್ಣ ಆಡೂರ, ಶಂಕ್ರಯ್ಯ, ಚನ್ನಪ್ಪ ಗುಟಗನೂರ, ಶಿವಾನಂದಯ್ಯ, ಯಂಕಣ್ಣ ವರಕನಹಳ್ಳಿ, ಶಂಕರ, ಮಲ್ಲಪ್ಪ, ಸುರೇಶ, ಅಕ್ಬರ, ಅಜರುದ್ದೀನ, ಟಿಪ್ಪುಸುಲ್ತಾನ, ಬಾಷುಸಾಬ, ಶರಣಪ್ಪ, ಸಂಗಪ್ಪ, ಹೇಮರಡ್ಡಿ, ವಿರುಪಣ್ಣ, ಬಸವರಾಜ, ಶಿವಪ್ಪ, ಮಲ್ಲಪ್ಪ ಹಾಗೂ ಇತರರು ಇದ್ದರು.