ಜಿಲ್ಲೆ

ನಿವೃತ್ತ ಸರ್ಕಾರಿ ನೌಕರರ ಆಕ್ರೋಶ

ಯಳಂದೂರು: ಸರ್ಕಾರಿ ನೌಕರಿಯಿಂದ ನಿವೃತ್ತರಾದವರಿಗೆ 7ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿಸಿಆರ್‌ಜಿ ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತ ಆರ್ಥಿಕ ಸೌಲಭ್ಯವನ್ನು ನೀಡಬೇಕೆಂದು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಗುರುವಾರ ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು.

ವೇದಿಕೆ ಜಿಲ್ಲಾ ಸಂಚಾಲಕ ರುದ್ರಯ್ಯ ಮಾತನಾಡಿ, ಜ.30ರ ಮಹಾತ್ಮ ಗಾಂಧೀಜಿ ಹುತಾತ್ಮರಾದ ಪುಣ್ಯ ಸ್ಮರಣೆ ದಿನದ ನಿಮಿತ್ತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 2022ರ ಜುಲೈಯಿಂದ 2024ರ ಜುಲೈ ಅವಧಿಯಲ್ಲಿ ನಿವೃತ್ತಿಯಾದ ನೌಕರರಿಗೆ 6ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿಸಿಆರ್‌ಜಿ ಕಮ್ಯುಟೇಶನ್, ಗಳಿಗೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿದ್ದಾರೆ.

ಈ ನಿಟ್ಟಿನಲ್ಲಿ ನಮಗೆ ಸುಮಾರು 12 ರಿಂದ 22 ಲಕ್ಷ ರೂ.ಗಳಷ್ಟು ಆರ್ಥಿಕ ನಷ್ಟವಾಗಿ ಅನ್ಯಾಯವಾಗಿದೆ. ಇದರಿಂದ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಸಾಕಷ್ಟ ಬಾರಿ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಜತೆಗೆ ಬೆಂಗಳೂರು, ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಸಚಿವರಾದ ಸತೀಶ್ ಜಾರಕಿಹೊಳಿ ನಮ್ಮೊಂದಿಗೆ ಚರ್ಚಿಸಲು ಸಭೆ ಕರೆಯುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆವಿಗೂ ಸಭೆ ಕರೆದಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕೂಡಲೇ ಸರ್ಕಾರ ಸಭೆಯನ್ನು ಕರೆಯಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಬೇಕು. ನಮ್ಮ ಭರವಸೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ನಂತರ ತಹಸೀಲ್ದಾರ್ ಜಯಪ್ರಕಾಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಜಿಲ್ಲಾ ಸಂಚಾಲಕ ಗುರುಸಿದ್ದಪ್ಪ, ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಂಚಾಲಕಿ ವೈ.ನಾಗರತ್ನ, ತಾಲೂಕು ಸಂಚಾಲಕರಾದ ವೈ.ಆರ್.ರಂಗಸ್ವಾಮಿ, ಎಸ್.ಭಾಗ್ಯ, ನಿರ್ದೇಶಕ ಎನ್.ರಾಜು, ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ, ರೇಣುಕಾ, ರಾಮಣ್ಣ, ಗೋವಿಂದರಾಜು, ರೇಚಣ್ಣ ಮತ್ತಿತರರು ಪಾಲ್ಗೊಂಡಿದ್ದರು.