ಹಾಸನ : ತಾಲೂಕಿನ ಕಟ್ಟಾಯ ಹೋಬಳಿಯ ಕಬ್ಬತ್ತಿ ಕ್ರಾಸ್ ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ ಸುಮಾರು 24 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್.ಎಂ. ಗಂಗಾನಾಯ್ಕ ಅವರನ್ನು ಬುಧವಾರ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ 1999ರಿಂದ 2023ನೇ ಸಾಲಿನ ವಿದ್ಯಾರ್ಥಿಗಳು ಹಾಜರಿದ್ದು, ಪಾಠ ಕಲಿಸಿದ ಗುರುವಿಗೆ ಗುರುವಂದನೆ ಅರ್ಪಿಸಿದರು.
ಪ್ರೀತಿಯ ವಿದ್ಯಾರ್ಥಿಗಳಿಂದ ಸನ್ಮಾನ ಹಾಗೂ ಉಡುಗೊರೆ ಸ್ವೀಕರಿಸಿ ಮಾತನಾಡಿದ ಗಂಗನಾಯ್ಕ ಅವರು, ಒಂದೇ ಶಾಲೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ನಿಜಕ್ಕೂ ಸಂತೋಷ, ಆತ್ಮತೃಪ್ತಿ ತಂದಿದೆ. ಇದೇ ಶಾಲೆಯಿಂದ ನಿವೃತ್ತಿ ಹೊಂದುತ್ತಿರುವುದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸರೋಜಾ. ಶಿಕ್ಷಕರಾದ ದೇವಿಮಣಿ, ಅಮೃತಾ, ಉಷಾ, ಹಳೆಯ ವಿದ್ಯಾರ್ಥಿಗಳಾದ ಎಂ.ವಿ. ಕೀರ್ತಿಕುಮಾರ್, ಸಿ.ಪಿ. ಪ್ರದೀಪ್, ಎಂ.ವಿ. ಸುಶ್ಮಿತಾ, ಸಿ.ಎಸ್. ಅನುಷಾ, ಎಂ. ಸಿ. ಮೇಘನಾ ಹಾಗೂ ಶಾಲೆಯ ಮಕ್ಕಳು, ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.