ಜಿಲ್ಲೆ

ನಿವೃತ್ತ ವಾರ್ತಾಧಿಕಾರಿಗೆ ರಾಜ್ಯೋತ್ಸವ ರತ್ನ ಪ್ರಶಸ್ತಿ

ಕಲಬುರಗಿ: ವಿಶ್ವ ಕನ್ನಡಿಗರ ಸಂಸ್ಥೆ ಕೊಡಮಾಡುವ ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ನಿವೃತ್ತ ವಾರ್ತಾಧಿಕಾರಿ ಜಿ.ಚಂದ್ರಕಾAತ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆ ರಾಜ್ಯಾಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ.

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಗೋರಚಿಂಚೋಳಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿರುವ ಚಂದ್ರಕಾAತ, ಬಾಲ್ಯದಿಂದಲೇ ಭಜನೆಯಲ್ಲಿ ಭಾಗವಹಿಸುತ್ತಿದ್ದರು. ನಾಟಕದಲ್ಲಿ ಬಾಲ ನಟನಾಗಿ ಅಭಿನಯಿಸುತ್ತಿದ್ದರು. ವಾರ್ತಾಧಿಕಾರಿಯಾಗಿ ಬೀದರ್, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಮೈಸೂರು ಮತ್ತು ಬೆಂಗಳೂರಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.

ಸೇವಾವಧಿಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಜಿಲ್ಲಾ ಮಟ್ಟದ ಅತ್ಯುತ್ತಮ ನಾಗರಿಕ ಸೇವಾ ಪ್ರಶಸ್ತಿ, ಧಾರವಾಡ ಆಕಾಶವಾಣಿಯಿಂದ ಬೆಳಗ್ಗೆ ಬಿತ್ತರಗೊಳ್ಳುವ ಪ್ರಾದೇಶಿಕ ವಾರ್ತೆಗಳ ಅತ್ಯುತ್ತಮ ವರದಿಗಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಲಬುರಗಿಯ ಗಡಿನಾಡ ಸಂಗೀತ ಸೇವಾ ಸಂಸ್ಥೆಯು ಇವರ ತ್ರಿಭಾಷಾ ವಚನ ಗಾಯನದ ವಿಶೇಷ ಪರಿಗಣಿಸಿ ಗಡಿನಾಡ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು, ಅನೇಕ ಸಂಘ-ಸಂಸ್ಥೆಗಳು ಸಹ ಸನ್ಮಾನಿಸಿವೆ.

ವಿಶ್ವವಿಖ್ಯಾತ ಮೈಸೂರು ದಸರಾ ಸೇರಿ ರಾಜ್ಯಾದ್ಯಂತ ಪ್ರಮುಖ ಉತ್ಸವಗಳಲ್ಲಿ ಗಜಲ್ ಗಾಯನ ಮತ್ತು ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಬಸವಣ್ಣನವರ ವಚನ ಗಾಯನದ ಸಾಧನೆ ಹಾಗೂ ಬಹುಭಾಷಾ ಪತ್ರಿಕೆಗಳಲ್ಲಿ ರೈತರ ಯಶೋಗಾಥೆ, ಹಬ್ಬ ಹರಿದಿನಗಳ ವಿಶೇಷ ಸಾರುವ ಇವರ ಲೇಖನಗಳು ಪ್ರಕಟವಾಗಿರುವುದನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಬೀದರ್‌ನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನ.೨೭ರಂದು ನಡೆಯುವ ಸಮಾರಂಭದಲ್ಲಿ ಜಿ.ಚಂದ್ರಕಾAತ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಕರಕನಳ್ಳಿ ತಿಳಿಸಿದ್ದಾರೆ.