ಹಾಸನ: ಗೋವಿಂದರಾಜು ಅವರು ಚೈತನ್ಯಶೀಲ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುತ್ತಾ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಶಿಷ್ಯ ವೃಂದದಲ್ಲಿ ಆಪ್ತ ಶಿಕ್ಷಕರೆಂದು ಗುರುತಿಸಿಕೊಂಡಿದ್ದಾರೆ ಎಂದು ವಾಣಿಜ್ಯ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ಜಿ.ಆರ್. ಮಂಜೇಶ್ ಹೇಳಿದರು.
ನಗರದ ಶಾಂತಿಗ್ರಾಮ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯೋಪಾಧ್ಯಾಯರಾಗಿ 39 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಜಿ.ಗೋವಿಂದರಾಜು ಅವರಿಗೆ ಶಾಂತಿಗ್ರಾಮ ಹೋಬಳಿ ಕ್ಲಸ್ಟರ್ ಶಿಕ್ಷಕ ವೃಂದ, ಶಾಲಾ ಆಡಳಿತ ವರ್ಗ ಮತ್ತು ಸಾರ್ವಜನಿಕರು ಶನಿವಾರ ಶಾಲಾ ಆವರಣದಲ್ಲಿ ಅದ್ಧೂಯಾಗಿ ಬೀಳ್ಕೊಡುಗೆ ನೀಡಲಾಯಿತು. ಈ ವೇಳೆ ಮಾತನಾಡಿದ ಅವರು, ಗೋವಿಂದರಾಜು ಅವರು ದಾನಿಗಳಿಂದ ದೇಣಿಗೆ ಪಡೆದು ಬಡ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರಗಳನ್ನು ನೀಡಿ ವಿದ್ಯಾರ್ಥಿಗಳ ಆರಾಧ್ಯ ದೈವರಾಗಿದ್ದರೆ. ಶಾಂತಿಗ್ರಾಮ ಶಾಲೆಯಲ್ಲಿ ಹದಿಮೂರು ವರ್ಷಗಳ ಸುಧೀರ್ಘ ಉತ್ತಮ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋವಿಂದರಾಜು, ಶಿಕ್ಷಕರು ಕಲಿತ ಋಣವನ್ನು ವಿದ್ಯಾರ್ಥಿಗಳಿಗೆ ಕಲಿಸಿ ತೀರಿಸಬೇಕು. ಶಿಕ್ಷಕರಾದವರು ಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡಿ, ಅದರ ಜ್ಞಾನವನ್ನು ಶಾಶ್ವತವಾಗಿ ಮಸ್ತಕದಲ್ಲಿರಿಸಿಕೊಂಡು, ಕಲಿತ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ಅವರನ್ನು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸುವುದು ಶಿಕ್ಷಕರ ಮೂಲ ಜವಾಬ್ದಾರಿ ಎಂದು ಹೇಳಿದರು.
ವಿದ್ಯೆಗೆ ಜಾತಿ ಮತ್ತು ವರ್ಗ ಎಂಬ ಭೇದವಿಲ್ಲ. ರಾಮಾಯಣ ಕರ್ತೃ ವಾಲ್ಮೀಕಿ, ಮಹಾಭಾರತ ಕರ್ತೃ ವ್ಯಾಸ, ಸರ್ವಜ್ಞ ಮತ್ತು ಕನಕದಾಸರು ಶ್ರೇಷ್ಠರೆಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಸರ್ವರನ್ನೂ ಸಮಾನವಾಗಿ ಕಾಣುವುದೇ ಶಿಕ್ಷಣದ ಗುರಿ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಶಾಂತಿಗ್ರಾಮ ಜ್ಯೂನಿಯರ್ ಕಾಲೇಜು ಪಾಶುಂಪಾಲ ಕೃಷ್ಣಪ್ರಸಾದ್, ನೂತನ ಮುಖ್ಯೋಪಾಧ್ಯಾಯರಾದ ಯಶೋಧಮ್ಮ, ಶಿಕ್ಷಕರಾದ ಗಿರಿಜಾ, ಮಂಜುನಾಥ್, ಶಾಂತಿಗ್ರಾಮ ವೃತ್ತದ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.