ಜಿಲ್ಲೆ

ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎಸ್.ಸುಜಾತಾ ಇನ್ನಿಲ್ಲ

ಮೈಸೂರು: ನಿವೃತ್ತ ಕನ್ನಡ ಪ್ರಾಧ್ಯಾಪಕಿ, ಸಾಹಿತಿ ಡಾ.ಎಚ್.ಎಸ್.ಸುಜಾತಾ(77) ಭಾನುವಾರ ಬೆಳಗ್ಗೆ ಆಲನಹಳ್ಳಿಯ ವಾಸವಿ ಶಾಂತಿಧಾಮದಲ್ಲಿ ನಿಧನರಾದರು. ಇವರಿಗೆ ಪತಿ ಡಾ.ಎಸ್.ರಮಾನಂದಶೆಟ್ಟಿ ಇದ್ದಾರೆ. ಅವರ ಕೋರಿಕೆ ಮೇರೆಗೆ ಜೆಎಸ್‌ಎಸ್ ಆಸ್ಪತ್ರೆಗೆ ದೇಹದಾನ ಮಾಡಲಾಯಿತು.

ಡಾ.ಎಚ್.ಎಸ್.ಸುಜಾತಾ ಅವರು ನಗರದ ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನಲ್ಲಿ 30 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಸಂಶೋಧನೆ, ವಿಮರ್ಶೆ, ಅನುವಾದ, ಗ್ರಂಥಸೂಚಿ, ಕಾವ್ಯ, ಮಕ್ಕಳ ಸಾಹಿತ್ಯ, ಗ್ರಂಥಸಂಪಾದನೆ, ಜೀವನಚರಿತ್ರೆ, ಅಂಕಣಬರಹ, ಸ್ಮತಿ ಸಾಹಿತ್ಯಗಳು ಅವರ ಆಸಕ್ತಿಯ ಕ್ಷೇತ್ರವಾಗಿದ್ದವು. 25 ಕೃತಿಗಳನ್ನು ಪ್ರಕಟಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್‌ನ ಮಲ್ಲಿಕಾ ಪ್ರಶಸ್ತಿ(1982), ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಅತ್ಯುತ್ತಮ ಸೃಜನಶೀಲ ಅನುವಾದ ಪುರಸ್ಕಾರ’(1987), ದೆಹಲಿಯ ಕನ್ನಡಿಗ ಮಾಸಪತ್ರಿಕೆಯ ‘ಗೋಪಾಲಕೃಷ್ಣ ಅಡಿಗ ಸ್ಮಾರಕ ಸಾಹಿತ್ಯ ಪ್ರಶಸ್ತಿ(1992), ಗೊರೂರು ಪ್ರತಿಷ್ಠಾನದ ಅತ್ಯುತ್ತಮ ಅನುವಾದ ಪ್ರಶಸ್ತಿ(2001), ಅತ್ತಿಮಬ್ಬೆ ಪ್ರತಿಷ್ಠಾನದ ‘ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ(2004) ಪಡೆದಿದ್ದರು.

ಕನ್ನಡ ಲೇಖಕಿಯರಲ್ಲಿ ಏಕವ್ಯಕ್ತಿಯ ಬದುಕು ಬರಹಗಳನ್ನು ಕುರಿತು ಸಂಶೋಧನೆ ಮಾಡಿದ್ದವರಲ್ಲಿ ಡಾ. ಸುಜಾತಾ ಮೊದಲಿಗರು. ಅದೇ ರೀತಿ ಲೇಖಕಿಯರಲ್ಲಿ ಅವರು ಮೊದಲ ಗ್ರಂಥಸೂಚಿಕರ್ತಿಯೂ ಆಗಿದ್ದರು. ತೆಲುಗಿನ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ರಾವೂರಿ ಭಾರದ್ವಾಜ ಅವರನ್ನು ಅವರ ‘ಜೀವನ ಸಮರ’ ಕೃತಿಯ ಮೂಲಕ ಮೊದಲ ಬಾರಿಗೆ ಕನ್ನಡಿಗರಿಗೆ ಪರಿಚಯಿಸಿದ್ದರು. ಜತೆಗೆ, ಕನ್ನಡದ ಮಹತ್ವದ ಬರಹಗಾರ ಅಶ್ವತ್ಥ ಅವರನ್ನು ಕುರಿತ ಪೂರ್ಣಪ್ರಮಾಣದ ಪ್ರಥಮ ಹಾಗೂ ಈವರೆಗಿನ ಏಕೈಕ ಕೃತಿಯನ್ನು ರಚಿಸಿದ್ದರು.

ಡಾ.ಸುಜಾತಾ ಅವರು ಮೈಸೂರು ವಿವಿ ಪದವಿ ಶಿಕ್ಷಣದ ಕನ್ನಡ ಅಧ್ಯಯನ ಮಂಡಳಿ ಹಾಗೂ ಪದವಿ ತರಗತಿಗಳ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ ದುಡಿದಿದ್ದರು. ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾದ ಕನ್ನಡ ಭಾಷಾ ಸಲಹಾ ಮಂಡಳಿ ಸದಸ್ಯರಾಗಿ ಕೆಲಸ ಮಾಡಿದ್ದರು.
ಕನ್ನಡ ಪುಸ್ತಕೋದ್ಯಮಕ್ಕೆ ಮೀಸಲಾದ ‘ಗ್ರಂಥಲೋಕ’ ನಿಯತಕಾಲಿಕೆ 1976ರಲ್ಲಿ ಪ್ರಾರಂಭವಾದಾಗಿನಿಂದಲೂ ಅದರ ಬರಹಗಾರ್ತಿಯಾಗಿ, 1990ರಿಂದ ಅದರ ಸಮಾಲೋಚನ ಸಮಿತಿ ಸದಸ್ಯರಾಗಿ 1992ರಲ್ಲಿ ’ಗ್ರಂಥಲೋಕ’ ನಿಲ್ಲುವವರೆಗೂ ಸೇವೆ ಸಲ್ಲಿಸಿದ್ದರು.