ಜಿಲ್ಲೆ

ನಿವೃತ್ತ ಪ್ರಾಧ್ಯಾಪಕರಿಗೆ ಸಮರ್ಪಕ ಪಿಂಚಣಿ ನೀಡಿ

ಮೈಸೂರು: ನಿವೃತ್ತಿಯ ಕೊನೆ ತಿಂಗಳ ಮೂಲ ವೇತನದ ಶೇ.50ರಷ್ಟು ಪಿಂಚಣಿಯನ್ನು ರಾಜ್ಯದ ವಿವಿ ಹಾಗೂ ಕಾಲೇಜುಗಳ ನಿವೃತ್ತ ಪ್ರಾಧ್ಯಾಪಕರಿಗೂ ನೀಡಬೇಕು ಎಂದು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕರ ಕ್ಷೇಮಾಭಿವೃದ್ಧಿ ಪರಿಷತ್ ಆಗ್ರಹಿಸಿದೆ.


ಪ್ರಾಧ್ಯಾಪಕರು ಇತ್ತ ರಾಜ್ಯ ಸರ್ಕಾರದ ನೌಕರರೂ ಅಲ್ಲ, ಅತ್ತ ಕೇಂದ್ರ ಸರ್ಕಾರದ ನೌಕರರಲ್ಲ ಎಂಬ ಪರಿಸ್ಥಿತಿ ಇದೆ. ಹೀಗಾಗಿ ವೇತನ ಪರಿಷ್ಕರಣೆ ಸಮರ್ಪಕವಾಗಿಲ್ಲ. ಇದರಿಂದಾಗಿ ಪಿಂಚಣಿಯೂ ಸಮರ್ಪಕವಾಗಿಲ್ಲ ಎಂದು ಪರಿಷತ್‌ನ ಅಧ್ಯಕ್ಷ, ನಿವೃತ್ತ ಕುಲಪತಿ ಪ್ರೊ.ಕೆ.ಪಿ.ಶ್ರೀನಾಥ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.


1996ರ ಯುಜಿಸಿ ವೇತನ ಶ್ರೇಣಿ ವಿಸ್ತರಣೆ ಸಂದರ್ಭದಲ್ಲೂ ಇಬ್ಬಗೆ ನೀತಿ ಅನುಸರಿಸಲಾಗಿದೆ. ಅಂತಿಮವಾಗಿ ಸುಪ್ರೀಂಕೋರ್ಟ್ ತೀರ್ಪಿನಂತೆ ಪರಿಷ್ಕರಿಸಿ ಆದೇಶ ನೀಡಿದ್ದು, ಇದನ್ನು ಸರ್ಕಾರ ಮರೆತಂತಿದೆ. ಆದ್ದರಿಂದ ಈಗಾಗಲೇ ಹೊರಡಿಸಿರುವ ಆದೇಶಕ್ಕೆ ಸೂಕ್ತ ಮಾರ್ಪಾಡು ಮಾಡಿ, ಕೊನೆ ತಿಂಗಳ ಮೂಲ ವೇತನದ ಶೇ.50ರಷ್ಟನ್ನು ರಾಜ್ಯ ಸರ್ಕಾರ ನಿಗದಿಪಡಿಸಬೇಕು. 7ನೇ ವೇತನ ಆಯೋಗದ ವ್ಯಾಪ್ತಿಗೆ ನಿವೃತ್ತ ಪ್ರಾಧ್ಯಾಪಕರ ಪಿಂಚಣಿ ಸೌಲಭ್ಯವನ್ನು ಸೇರಿಸಬೇಕೆಂದು ಆಗ್ರಹಿಸಿದರು.