ಜಿಲ್ಲೆ

ನಿಲ್ಲುತ್ತಿಲ್ಲ ಬಸ್ ತಲುಪಲಾಗುತ್ತಿಲ್ಲ ಕ್ಲಾಸ್!

ಧರ್ಮರಾಜ ರಾಮನಗೌಡ ಪಾಟೀಲ

ಮೋಹನ ಪಾಟಣಕರ ಅಥಣಿ ಗ್ರಾಮೀಣ: ಅಥಣಿ ತಾಲೂಕಿನಾದ್ಯಂತ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಅತ್ತ ವೇಳೆಗೆ ಸರಿಯಾಗಿ ತರಗತಿಗೂ ಹೋಗಲಾಗದ ಸ್ಥಿತಿ ಒಂದೆಡೆಯಾದರೆ ಹೋದರೂ ಸಕಾಲಕ್ಕೆ ಮನೆಗೆ ವಾಪಸ್ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಝುಂಜರವಾಡ, ಸುಟ್ಟಟ್ಟಿ, ದೇಸಾಯರಟ್ಟಿ, ಬುರ್ಲಟ್ಟಿ, ದಬದಬಹಟ್ಟಿ, ಕಟಗೇರಿ, ಶಿರಹಟ್ಟಿ, ನಂದಗಾಂವ, ಘಟನಟ್ಟಿ, ಸವದಿ, ಜನವಾಡ, ಮಹಿಷವಾಡಗಿ, ನಂದೇಶ್ವರ, ಸತ್ತಿ, ಅಡಹಳ್ಳಿ. ಕೋಹಳ್ಳಿ, ಯಕ್ಕಂಚಿ, ಕಕಮರಿ ಐಗಳಿ, ಕೊಟ್ಟಲಗಿ, ಚಮಕೇರಿ, ಜಂಬಗಿ, ಅನಂತಪುರ, ಖಿಳೇಗಾಂವ, ಮಸರಗುಪ್ಪಿ ಸೇರಿ ಹಲವು ಮಾರ್ಗವಾಗಿ ಸಂಚರಿಸುವ ಬಹುತೇಕ ಬಸ್‌ಗಳು ಜನದಟ್ಟಣೆಯಿಂದ ತುಂಬಿ ತುಳುಕುತ್ತಿವೆ.

ವಿದ್ಯಾರ್ಥಿಗಳು ಸರಿಯಾದ ವೇಳೆಗೆ ಬಸ್ ನಿಲುಗಡೆ ಸ್ಥಳಕ್ಕೆ ಬಂದರೂ ಬಸ್ ತುಂಬಿದೆ ಎಂದು ನಿಲ್ಲಿಸದೇ ಹೋಗುವುರಿಂದ ಝುಂಜರವಾಡ, ಸುಟ್ಟಟ್ಟಿ ಗ್ರಾಮದ ವಿದ್ಯಾರ್ಥಿಗಳು ನಡೆದುಕೊಂಡು ಹೋಗಿ ತರಗತಿಗೆ ಹಾಜರಾಗುತ್ತಿದ್ದಾರೆ. ಕೆಲವೆಡೆ ಮರಳಿ ಬರುವಾಗ ರಾತ್ರಿಯಾಗುವ ತನಕ
ಬಸ್ಸಿಗೆ ಕಾಯೋದು ಕಾಯಕವಾಗಿಬಿಟ್ಟಿದೆ. ತರಗತಿ ತಪ್ಪಬಾರದೆಂಬ ಉದ್ದೇಶದಿಂದ ಕೆಲವರು ಖಾಸಗಿ ವಾಹನಗಳ ಮೂಲಕ ತೆರಳುತ್ತಿದ್ದಾರೆ. ಕೆಲ ಪಾಲಕರು ಬೈಕ್ ಮೇಲೆ ಮಕ್ಕಳನ್ನು ಬಿಟ್ಟು ಬರುತ್ತಿದ್ದಾರೆ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಥಣಿ ತಾಲೂಕಿನ ಗ್ರಾಮೀಣ ಪ್ರದೇಶಗಳತ್ತ ಗಮನ ಹರಿಸಿ ಹೆಚ್ಚಿನ ಬಸ್
ಸಂಚರಿಸುವಂತೆ ಮಾಡಿ ವೇಳೆಗೆ ಸರಿಯಾಗಿ ತರಗತಿಗೆ ಹಾಜರಾಗುವಂತೆ ಮಾಡಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

ಅಥಣಿ ಘಟಕದಲ್ಲಿ ಬಸ್‌ಗಳ ಕೊರತೆ ಇದ್ದು, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಸಮಸ್ಯೆಯಾಗಿದೆ. ಅದರಲ್ಲೂ 4-5 ವರ್ಷಗಳಿಂದ ಅಥಣಿ ಘಟಕದಲ್ಲಿ ಚಾಲಕ, ನಿರ್ವಾಹಕರ ಕೊರತೆ ಇರುವುದರಿಂದ ಹೆಚ್ಚಿನ ಬಸ್ ಓಡಿಸಲು ಆಗುತ್ತಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ಕಾರ್ಯಾಚರಣೆ ನಡೆಸಲಾಗುವುದು.| ನಿಜಗುಣ ಕೇರಿ ಘಟಕ ವ್ಯವಸ್ಥಾಪಕ ಅಥಣಿ
ಬಸ್ ತುಂಬಿ ಬರುತ್ತಿರುವುದರಿಂದ ನಿಲುಗಡೆ ಮಾಡುತ್ತಿಲ್ಲ. ತಡವಾಗಿ ಹೋದರೆ ಉಪನ್ಯಾಸಕರು ಮತ್ತು ಶಿಕ್ಷಕರು ನಮ್ಮನ್ನು ಹೊರಗಡೆ ನಿಲ್ಲಿಸುತ್ತಾರೆ. ಸಂಬಂಧಪಟ್ಟವರು ವಿದ್ಯಾರ್ಥಿಗಳ ಸಂಚಾರಕ್ಕೆ ವಿಶೇಷ ಬಸ್ ಸೇವೆ ಒದಗಿಸಲಿ.| ನಿರ್ಮಲಾ ವಿದ್ಯಾರ್ಥಿನಿ, ಕೊಕಟನೂರ