ಮೈಸೂರು: ನರಸಿಂಹರಾಜ ಕ್ಷೇತ್ರದಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ತನ್ವೀರ್‌ಸೇಠ್ 6ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ವಿಧಾನಸಭೆ ಚುನಾವಣೆಯ ಕಣಕ್ಕಿಳಿದಾಗಿನಿಂದಲೂ ಸೋಲನ್ನೇ ಕಾಣದ ತನ್ವೀರ್‌ಸೇಠ್, ಈ ಬಾರಿ 83,480 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಬಿಜೆಪಿಯ ಎಸ್.ಸತೀಶ್ (ಸಂದೇಶ್ ಸ್ವಾಮಿ) ವಿರುದ್ಧ 31120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
2018ರ ಚುನಾವಣೆಯಲ್ಲಿ 62,268 ಮತ ಪಡೆದು ಬಿಜೆಪಿಯ ಸಂದೇಶ್‌ಸ್ವಾಮಿ ವಿರುದ್ಧ 18,127 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸಂದೇಶ್ ಸ್ವಾಮಿ 44,141 ಮತ ಪಡೆದಿದ್ದರು. ಕ್ಷೇತ್ರದಲ್ಲಿ ಪ್ರಬಲವಾಗಿರುವ ಎಸ್‌ಡಿಪಿಐ ಈ ಬಾರಿ ಟಕ್ಕರ್ ಕೊಡಲಿದೆ ಎನ್ನುವ ಲೆಕ್ಕಾಚಾರ ತಲೆಕೆಳಗಾಗಿವೆ.
ಮುಸ್ಲಿಮರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಬಿಜೆಪಿ ಹೊರತುಪಡಿಸಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮುಸ್ಲಿಮರೇ ಇದ್ದರೂ, ಮತದಾರರು ತನ್ವೀರ್ ಅವರಿಗೆ ಮತ್ತೆ ಮಣೆ ಹಾಕಿದ್ದಾರೆ. ತನ್ನದೇ ಪಕ್ಷದಲ್ಲಿಯ ಒಳ ರಾಜಕೀಯದಿಂದ ಬೇಸತ್ತು ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿದ್ದರು. ಇದರಿಂದ ಅಭಿಮಾನಿಗಳು, ಕಾರ್ಯಕರ್ತರು ಸ್ಪರ್ಧೆ ಮಾಡಬೇಕು ಎಂದು ತನ್ವೀರ್ ಸೇಠ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಮದುವೆ ಸಮಯದಲ್ಲಿ ತಮ್ಮ ಮೇಲೆ ನಡೆದ ಮಾರಣಾಂತಿ ಹಲ್ಲೆಯ ಅನುಕಂಪವೂ ಈ ಚುನಾವಣೆಯಲ್ಲಿ ತನ್ವೀರ್ ಅವರಿಗೆ ಮತವಾಗಿ ಪರಿವರ್ತನೆಗೊಂಡಿತು.
ಈ ಬಾರಿ ಸೋಲಿನ ಸರಪಳಿ ಕಳಚಲಿದ್ದಾರೆ ಎನ್ನುವ ಪಕ್ಷದ ಲೆಕ್ಕಾಚಾರ ತಲೆಕೆಳಗಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ಸತೀಶ್ (ಸಂದೇಶ್ ಸ್ವಾಮಿ) ಸೋಲು ಅಭವಿಸಿದ್ದಾರೆ. ಕಳೆದ ಚುನಾವಣೆಗಿಂತ ಹೆಚ್ಚಿನ ಮತ ಪಡೆದು ಈ ಬಾರಿ 52360 ಮತ ಗಳಿಸಿದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ.
ಸತತವಾಗಿ ಸೋಲುತ್ತಿದ್ದೇನೆ. ಈ ಬಾರಿ ನನ್ನನ್ನು ಬೆಂಬಲಿಸಿ ಎಂದು ಜನರಲ್ಲಿ ಕಣ್ಣೀರಿನ ಮೂಲಕ ಮತಯಾಚನೆ ಮಾಡಿದರೂ ಮತದಾರರ ಮನ ಕರಗಿಲ್ಲ. ಜತೆಗೆ ಕ್ಷೇತ್ರದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ತನ್ನ ಸಂಬಂಧಿಕರು, ಆಪ್ತರ ಮೂಲಕ ಪ್ರಚಾರ ನಡೆಸಿದರು. ಹೀಗಾಗಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಬೇರೆ ಕ್ಷೇತ್ರಗಳಿಗೆ ತೆರಳಿ ಪ್ರಚಾರ ಮಾಡುವ ಅನಿವಾರ್ಯತೆ ಉಂಟಾಯಿತು. ಅಲ್ಲದೆ, ಇವರ ಹಿರಿಯ ಸಹೋದರ ಸಂದೇಶ್ ನಾಗರಾಜ್ ಕಾಂಗ್ರೆಸ್ ಸೇರಿದ್ದರಿಂದ ಪಕ್ಷದ ಪರ ಪ್ರಚಾರ ಮಾಡಿದರು. ಇದು ಕೂಡ ಸಂದೇಶ್ ಸ್ವಾಮಿ ಅವರ ಹಿನ್ನೆಡೆಗೆ ಒಂದು ಕಾರಣ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿಯೇ ಕೇಳಿಬರುತ್ತಿವೆ.
2013ರ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿ ಎರಡನೇ ಸ್ಥಾನಕ್ಕೇರಿದ್ದ ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ಈ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ನಾಲ್ಕು ಚುನಾವಣೆಯಿಂದಲೂ ಸ್ಪರ್ಧೆ ಮಾಡುತ್ತಾ ಬರುತ್ತಿರುವ ಅಬ್ದುಲ್ ಮಜೀದ್, ಮುಸ್ಲಿಂ ಮತಗಳನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ. ಈ ಬಾರಿಯೂ ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ಪ್ರಚಾರ ನಡೆಸಿ ಸದ್ದು ಮಾಡಿ ಗಮನ ಸೆಳೆದಿದ್ದರು.
ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿ ಜೆಡಿಎಸ್ ಸೇರಿದ್ದ ಅಬ್ದುಲ್ ಖಾದರ್ (ಶಾಯಿದ್) ಕೇವಲ 3,548 ಮತ ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಬೆಂಬಲದಿಂದ ಅದ್ದೂರಿ ಕಾರ್ಯಕ್ರಮ ಸಂಘಟಿಸಿ ಪಕ್ಷ ಸೇರ್ಪಡೆಗೊಂಡಿದ್ದರೂ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಮತ ಗಳಿಸಲು ವಿಫಲರಾಗಿದ್ದಾರೆ. ಪಕ್ಷ ಇಷ್ಟೊಂದು ಹೀನಾಯ ಸ್ಥಿತಿಗೆ ಯಾವ ಚುನಾವಣೆಯಲ್ಲಿಯೂ ತಲುಪಿರಲಿಲ್ಲ. ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಾಯಿದ್ ಅವರು ತನ್ವೀರ್‌ಸೇಠ್ ಅವರ ಬೆಂಬಲಿಗರಾಗಿದ್ದು, ಚುನಾವಣೆಯಲ್ಲಿ ತಟಸ್ಥರಾಗಿದ್ದರು ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.
ಕಾಂಗ್ರೆಸ್ ತೊರೆದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯಿಂದ ಕಣಕ್ಕಿಳಿದಿದ್ದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ರೆಹನಾಬಾನು ಕೇವಲ 134 ಮತಗಳಿಸಲಷ್ಟೇ ಸಾಧ್ಯವಾಗಿದೆ. ನಾಮಪತ್ರ ಸಲ್ಲಿಸಿದ್ದರೂ ಪ್ರಚಾರ ನಡೆಸಿಲ್ಲ ಎನ್ನಲಾಗಿದೆ.
ಇತರ ಅಭ್ಯರ್ಥಿಗಳು ಪಡೆದ ಮತಗಳು
ಧರ್ಮಶ್ರೀ -ಆಮ್ ಆದ್ಮಿಪಾರ್ಟಿ( 696), ಖಲೀಲ್ ಉರ್ ರೆಹಮಾನ್ ಷರೀಫ್ -ಆಲ್ ಇಂಡಿಯಾ ವುಮೆನ್ ಎಂಪವರ್ ಮೆಂಟ್ ಪಾರ್ಟಿ (126), ಲೀಲಾ ಶಿವಕುಮಾರ್-ಉತ್ತಮ ಪ್ರಜಾಕೀಯ ಪಾರ್ಟಿ (786), ವಿನೋದ್ ಚಾಕೋ -ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (120), ಸುಂದರ್ ಪ್ರೇಮ್ ಕುಮಾರ್-ಕರ್ನಾಟಕ ರಾಷ್ಟ್ರ ಸಮಿತಿ (196), ಪಕ್ಷೇತರರಾದ ಎಂ.ಎಂ. ನೀಲಕಂಠ (80), ಆರ್. ಸಿ. ರಾಜು (150), ರಾಬರ್ಟ್ (235), ಎಂ.ಲಿಂಗರಾಜ್ (91), ಜಿ. ಲೋಕೇಶ್‌ಕುಮಾರ್ (209, ಜಿ.ಬಿ.ಶಿವಣ್ಣ (346), ಎಸ್. ಆಲಿಷನ್ (138).