ಹುಬ್ಬಳ್ಳಿ: ಸೂಕ್ತ ನಿರ್ವಹಣೆ ಇಲ್ಲದೆ ನಗರದ ಹೃದಯ ಭಾಗದಲ್ಲಿರುವ ನೆಹರು ಮೈದಾನ ಹದಗೆಟ್ಟು ಹೋಗಿದೆ. ಮಳೆ ನೀರು ನಿಂತು ಕೆಸರುಗದ್ದೆಯಂತಾಗಿದೆ.
ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಇಲ್ಲಿ ಕಳೆದ 4 ತಿಂಗಳಿಂದ ಯಾವುದೇ ಸಾರ್ವಜನಿಕ ಚಟುವಟಿಕೆ ನಡೆದಿಲ್ಲ. ಸಾರ್ವಜನಿಕರಿಗೆ ಬೆಳಗ್ಗೆ ವಾಕಿಂಗ್ಗೆ ಅವಕಾಶ ನೀಡಿದ ಬಳಿಕ ಮೈದಾನದ ನಾಲ್ಕು ಗೇಟ್ಗಳನ್ನು ಬಂದ್ ಮಾಡಲಾಗುತ್ತದೆ. ಈ ಮೈದಾನವು ಪಾಲಿಕೆ ಒಡೆತನದಲ್ಲಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಮೈದಾನ ದುಸ್ಥಿತಿಗೆ ತಲುಪಿದೆ.
ಇದು ಮೈದಾನವೋ ಅಥವಾ ನಿರ್ಲಕ್ಷಿತ ಕೆರೆಯೋ ಎಂದು ಭಾಸವಾಗುತ್ತಿದೆ. ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಅರ್ಧ ಮೈದಾನ ಜಲಾವೃತಗೊಂಡಿದೆ. ಆಗಾಗ ಗಟಾರ್ ನಿರ್ವಣಕ್ಕೆ, ಮಣ್ಣು ಹಾಕಿ ಸಮತಟ್ಟುಗೊಳಿಸಲು ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಉಳಿದರ್ಧ ಮೈದಾನದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಇದು ಬೆಳಗ್ಗೆ ವಾಕಿಂಗ್ ಬರುವವರ ಆಕ್ರೋಶಕ್ಕೆ ಕಾರಣವಾಗಿದೆ.
ಚುನಾವಣೆ ಪ್ರಚಾರ, ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಗೆ ನೆಹರು ಮೈದಾನ ವೇದಿಕೆಯಾಗಿತ್ತು. ಇದೀಗ ಕಳೆದ 4 ತಿಂಗಳಿಂದ ಅಥವಾ ಯಾವುದೇ ಚಟುವಟಿಕೆ ಇಲ್ಲಿ ನಡೆದಿಲ್ಲ. ಹಾಗಾಗಿ ಪಾಲಿಕೆಗೆ ಆದಾಯವೂ ಇಲ್ಲ. ಇದೇ ಕಾರಣಕ್ಕೆ ಪಾಲಿಕೆ ಮೈದಾನವನ್ನು ಸುಸ್ಥಿತಿಯಲ್ಲಿಡುವ ಗೋಜಿಗೆ ಹೋಗಲಿಲ್ಲ. ಹಾಳಾಗಿ ಹೋಗಲಿ ಎಂಬ ಉಡಾಫೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ನೆಹರು ಮೈದಾನ ನವೀಕರಿಸುವ ಕಾಮಗಾರಿ ಸದ್ಯದಲ್ಲೇ ಆರಂಭವಾಗಬೇಕಿದೆ. ಹೀಗಿರುವಾಗ ನಾವ್ಯಾಕೆ ಖರ್ಚು ಮಾಡಬೇಕು ಎಂಬುದು ಪಾಲಿಕೆ ಧೋರಣೆಯಾಗಿದೆ. ಹಾಗಾಗಿ ನೆಹರು ಮೈದಾನ ನಿರ್ಲಕ್ಷಿಸಲ್ಪಟ್ಟಿದೆ.
ನೆಹರು ಮೈದಾನವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೈದಾನವನ್ನು ಈವರೆಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ಗೆ ಹಸ್ತಾಂತರಿಸಿಲ್ಲ. ಸದ್ಯ ನಿರ್ವಹಣೆ ಕೊರತೆಯಿಂದ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ.| ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ