ಜಿಲ್ಲೆ

ನಿರ್ವಹಣೆ ಕೊರತೆಯಿಂದ ಬಳಲುತ್ತಿರುವ ಆರ್‌ಒ ಪ್ಲಾಂಟ್‌ಗಳು

ಮಂಜುನಾಥ ಟಿ.ಭೋವಿ ಮೈಸೂರು

ಗ್ರಾಮದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂಬ ಸದಾಶಯದಿಂದ ತೆರೆದಿರುವ ಶುದ್ಧ ಕುಡಿಯುವ ನೀರಿನ ಘಟಕಗಳು (ಆರ್‌ಒ ಪ್ಲಾಂಟ್) ನಿರ್ವಹಣೆ ಕೊರತೆಯಿಂದ ನಲುಗುತ್ತಿವೆ.
ಬಹುತೇಕ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಿರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.

ಜಿಲ್ಲೆಯಲ್ಲಿ 623 ಘಟಕಗಳು:
ಜಿಲ್ಲೆಯಲ್ಲಿ ಅನುಮೋದನೆಗೊಂಡ ಘಟಕಗಳ ಸಂಖ್ಯೆ 638. ಇದರಲ್ಲಿ ಸ್ಥಳದ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಕ್ಕೆ 15 ಘಟಕಗಳ ನಿರ್ಮಾಣವನ್ನು ಕೈಬಿಡಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ 623 ಘಟಕಗಳನ್ನು ತೆರೆಯಲಾಗಿದೆ. ಇದರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 239, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಿಂದ (ಕೆಆರ್‌ಐಡಿಎಲ್) 291, ಸಹಕಾರ ಸಂಸ್ಥೆಗಳಿಂದ 48, ಇತರ ಸಂಸ್ಥೆಗಳಿಂದ 45 ನೀರಿನ ಘಟಕಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಪೈಕಿ 605 ಘಟಕಗಳು ಸುಸ್ಥಿತಿಯಲ್ಲಿ ಇವೆ. ಬರೀ 18 ಘಟಕಗಳು ದುಸ್ಥಿತಿಯಲ್ಲಿ ಇವೆ.

ಕಚ್ಚಾ ನೀರಿನ ಸಮಸ್ಯೆಯಿಂದ 12, ವಿದ್ಯುಚ್ಛಕ್ತಿ ಸಮಸ್ಯೆಯಿಂದ 1, ಏಜೆನ್ಸಿಗಳ ಸಮಸ್ಯೆಯಿಂದ 1, ಕಾರ್ಯಾಚರಣೆ, ನಿರ್ವಹಣೆ ಸಮಸ್ಯೆಯಿಂದ 1 ಮತ್ತು ಇನ್ನಿತರ ಸಮಸ್ಯೆಗಳಿಂದ 3 ಘಟಕಗಳು ದುಸ್ಥಿತಿಯಲ್ಲಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ಆದರೆ, ಈ ಅಂಕಿ -ಅಂಶ ವಾಸ್ತವಾಂಶಕ್ಕೆ ಹತ್ತಿರವಾಗಿಲ್ಲ. ಗ್ರಾಮಾಂತರ ಪ್ರದೇಶದಲ್ಲಿರುವ ಶೇ.50ರಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ದುಸ್ಥಿತಿಯಲ್ಲಿವೆ. ಇಲ್ಲವೇ ನಿರ್ವಹಣೆ ಸಮಸ್ಯೆಯಿಂದ ಬಳಲುತ್ತಿವೆ. ಈ ವಿಷಯವನ್ನು ಅಧಿಕಾರಿಗಳು ಮರೆಮಾಚುತ್ತಿದ್ದಾರೆ. ಈ ಕುರಿತು ಮೂರನೇ ವ್ಯಕ್ತಿಯಿಂದ ಸ್ಥಳ ಪರಿಶೀಲನೆ ಮಾಡಿದಾಗ ಸತ್ಯಾಂಶ ಗೊತ್ತಾಗಲಿದೆ ಎಂದು ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಗ್ರಾಮಸ್ಥರು ಪರದಾಟ:
ನಿತ್ಯ ತಾಲೂಕಿನಲ್ಲಿ ಕನಿಷ್ಠ 10 ಘಟಕಗಳು ಕೆಟ್ಟಿವೆ. ಇವುಗಳನ್ನು ದುರಸ್ತಿ ಮಾಡಬೇಕಾಗಿರುವ ಏಜೆನ್ಸಿ ಹಾಗೂ ಗ್ರಾಮ ಪಂಚಾಯಿತಿಗಳು ನಿರ್ಲಕ್ಷ್ಯ ತೋರುತ್ತಿವೆ. ಇದರಿಂದಾಗಿ ದುರಸ್ತಿಯಾಗಲು ವಾರಗಟ್ಟಲೆ ಸಮಯ ಕಳೆದುಹೋಗುತ್ತದೆ. ಶುದ್ಧ ಕುಡಿಯುವ ನೀರಿನ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಸಕಡ್ಡಿ, ಧೂಳು…:
ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಘಟಕದ ಗಾಜುಗಳನ್ನು ಒಡೆದು ಬಹುತೇಕ ಪರಿಕರಗಳನ್ನು ಕಳವು ಮಾಡಲಾಗಿದೆ. ಕೆಲ ಘಟನೆಗಳ ಪರಿಕರಗಳು ಧೂಳಿನಲ್ಲಿ ಮಿಂದೆದ್ದಿವೆ. ಘಟಕದ ಒಳಗೆ ಕಸ, ಮರಗಿಡದ ಎಲೆಗಳು ಬಿದ್ದಿವೆ. ಇದನ್ನು ತೆಗೆದು ಸ್ವಚ್ಛಗೊಳಿಸುವ ಕೆಲಸ ನಿಯಮಿತವಾಗಿ ನಡೆಯುತ್ತಿಲ್ಲ. ಇದು ಸಹ ಘಟಕ ದುಸ್ಥಿತಿಗೆ ಬರಲು ಮತ್ತೊಂದು ಕಾರಣವಾಗಿದೆ.

ಎಫ್‌ಐಆರ್ ದಾಖಲಿಸಿ
ಕೆಲವರು ಶುದ್ಧ ಕುಡಿಯುವ ನೀರಿನ ಘಟಕಗಳಿಂದಲೇ ನೀರನ್ನು ತಂದು ಅದನ್ನು ನೀರಿನ ಕ್ಯಾನ್‌ಗಳಲ್ಲಿ ತುಂಬಿ ಮಾರಾಟ ಮಾಡುವುದು ಸಹ ವರದಿಯಾಗುತ್ತಿದೆ. 20 ಲೀಟರ್‌ನ ವಾಟರ್ ಕ್ಯಾನ್‌ಗೆ ತಮ್ಮ ಕಂಪನಿ ಹೆಸರು ಅಂಟಿಸಿ ಸಾರ್ವಜನಿಕರಿಗೆ 30, 40, 50 ರೂ.ಗೆ ಮಾರಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ರವಿಕುಮಾರ್ ಆಗ್ರಹಿಸಿದರು.

ವಾಣಿಜ್ಯ ಉದ್ದೇಶಕ್ಕೆ ನೀರು ಬಳಕೆ:
ಕಲ್ಯಾಣಮಂಟಪ, ಹೋಟೆಲ್, ಫಾಸ್ಟ್‌ಫುಡ್ ಸೇರಿದಂತೆ ವಾಣಿಜ್ಯ ಉದ್ದೇಶಕ್ಕೆ ಈ ನೀರನ್ನೇ ಬಳಕೆ ಮಾಡುತ್ತಿದ್ದು, ರಾತ್ರಿ ಹೊತ್ತಿನಲ್ಲಿ ಹತ್ತಾರು ವಾಟರ್ ಕ್ಯಾನ್‌ಗಳನ್ನು ತುಂಬಿಸಿಕೊಂಡು ಹೋಗುತ್ತಾರೆ. ಈ ರೀತಿ ಆರ್‌ಒ ಪ್ಲಾಂಟ್‌ಗಳು ದುರ್ಬಳಕೆ ಆಗುತ್ತಿವೆ. ನಿರಂತರ ಬಳಕೆಯಿಂದಲೂ ಅವುಗಳು ದುಸ್ಥಿತಿಗೆ ಬರುತ್ತಿವೆ.

ಪೋಲಾಗುವ ನೀರು: ಆರ್‌ಒ ಪ್ಲಾಂಟ್‌ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲು ಆಗುತ್ತಿದೆ. 20 ಲೀಟರ್‌ನಷ್ಟು ಶುದ್ಧ ನೀರಿನ ಉತ್ಪಾದನೆಗೆ ಅದರ ಅರ್ಧದಷ್ಟು ನೀರು ಚರಂಡಿಗೆ ಸೇರುತ್ತಿದೆ. ಇದರಿಂದ ಅಂತರ್ಜಲ ಬರಿದಾಗಲಿದೆ. ಜತೆಗೆ, ಬೋರ್‌ವೆಲ್ ನೀರು ಮೇಲೆತ್ತಲು ವಿದ್ಯುತ್ ವೆಚ್ಚದ ಹೊರೆ ಅಧಿಕವಾಗುತ್ತದೆ. ಇದೆಲ್ಲ ನೈಸರ್ಗಿಕ ಸಂಪನ್ಮೂಲದ ನಷ್ಟವಾಗಿದೆ ಎಂಬ ಮಾತು ಸಹ ಇದೆ.

ಮೈಸೂರು ನಗರದಲ್ಲಿ ಕೊಂಚ ಉತ್ತಮ
ಗ್ರಾಮಾಂತರ ಪ್ರದೇಶಕ್ಕಿಂತ ಮೈಸೂರು ನಗರದಲ್ಲಿರುವ ಆರ್‌ಒ ಪ್ಲಾಂಟ್‌ಗಳ ಸ್ಥಿತಿ ಉತ್ತಮವಾಗಿದೆ.
ಗುತ್ತಿಗೆದಾರರು 5 ವರ್ಷಗಳ ಕಾಲ ಅದರಿಂದ ಆದಾಯ ಸಂಗ್ರಹಿಸಿ, ಅದರ ನಿರ್ವಹಣೆ ಮಾಡಿಕೊಂಡು ಹೋಗುವ ಜವಾಬ್ದಾರಿ ನಿಗದಿಪಡಿಸಲಾಗಿದೆ. ಇದುವೇ ಬಹುತೇಕ ಕಡೆ ಆರ್‌ಒ ಪ್ಲಾಂಟ್ ಸುಸ್ಥಿತಿಯಲ್ಲಿ ಇರಲು ಕಾರಣವಾಗಿದೆ.

ಪಾಲಿಕೆ ವತಿಯಿಂದ 120 ಆರ್‌ಒ ಪ್ಲಾಂಟ್ ತೆರೆಯಲಾಗಿದೆ. ಒಂದು ಘಟಕ ನಿರ್ಮಾಣಕ್ಕೆ ಅಂದಾಜು 10 ಲಕ್ಷ ರೂ. ಖರ್ಚು ಮಾಡಲಾಗಿದೆ. 20 ಲೀಟರ್ ನೀರಿಗೆ ಗ್ರಾಹಕರು ಕೊಡುವ 5 ರೂಪಾಯಿಯಿಂದ ಸಂಗ್ರಹವಾಗುವ ಹಣದಲ್ಲಿ ಲಾಭ, ನಿರ್ವಹಣೆ, ವಿದ್ಯುತ್ ವೆಚ್ಚ ಇನ್ನಿತರ ಖರ್ಚು ವೆಚ್ಚವನ್ನು ಸರಿದೂಗಿಸಿಕೊಂಡು ಹೋಗಬೇಕಿದೆ. ಜತೆಗೆ, ಪ್ರತಿ ವಾರ್ಡ್‌ಗೆ 2-3 ಸೇರಿದಂತೆ ನಗರದಲ್ಲಿ 150 ಖಾಸಗಿ ಆರ್‌ಒ ಪ್ಲಾಂಟ್‌ಗಳು ಇವೆ ಎಂದು ಪಾಲಿಕೆ ವಾಣಿವಿಲಾಸ ನೀರು ಸರಬರಾಜು ಕೇಂದ್ರ ಎಇ ಮಹಮ್ಮದ್ ಮುಸ್ತಾಫ್ ತಿಳಿಸಿದರು.