ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಜೀವನ ಕಟ್ಟಿಕೊಡುವ ಜತೆ ಇಲ್ಲಿನ ಜೀವವೈವಿಧ್ಯ ಪ್ರತಿಬಿಂಬಿಸುವ ಶಾಲ್ಮಲಾ ಶಿಲ್ಪವನವು ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಪಾಚಿಗಟ್ಟಿದ ಕಲಾಕೃತಿಗಳ ಕಾರಣಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ.
ಶಿರಸಿ ದಮನಬೈಲ್ ಬಳಿ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಅನುದಾನದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ವರ್ಷಗಳ ಹಿಂದೆ ಈ ಶಾಲ್ಮಲಾ ಶಿಲ್ಪವನ ನಿರ್ವಣಗೊಂಡಿದೆ.
ಶಿಗ್ಗಾಂವಿ ಸಮೀಪದ ಗೊಟಗೋಡಿ ರಾಕ್ ಗಾರ್ಡನ್ ಸಿದ್ಧಪಡಿಸಿರುವ ಸೊಲಬಕ್ಕನವರ ಇಲ್ಲಿನ ಶಿಲ್ಪ ಕಲಾಕೃತಿಗೆ ಜೀವಂತಿಕೆ ನೀಡಿದ್ದಾರೆ. ಸದಾ ಪ್ರವಾಸಿಗರು, ಸ್ಥಳೀಯರಿಂದ ತುಂಬಿರುತ್ತಿದ್ದ ಈ ವನ ನಿರ್ವಹಣೆ ಕೊರತೆಯಿಂದ ಪಾಚಿ ಹೊದ್ದು ನಿಲ್ಲುವಂತಾಗಿದೆ.
ಕಲಾಕೃತಿಗಳ ಮೇಲೆ ಪಾಚಿ: ಜಿಲ್ಲೆಯ ಬುಡಕಟ್ಟು ಜನಾಂಗಗಳಾದ ಸಿದ್ದಿ, ಗೌಳಿ, ಹಾಲಕ್ಕಿ ಗೌಡ, ಕುಣಬಿ, ಗೊಂಡ, ಸಮುದಾಯದ ಜೀವನ ಶೈಲಿಯ ತೋರ್ಪಡಿಸಲು ಅವರ ಜೀವನ ಶೈಲಿಯಲ್ಲೇ ಸಿಮೆಂಟ್ನಿಂದ ಕಲಾಕೃತಿ ನಿರ್ವಿುಸಲಾಗಿದೆ. ಜತೆಗೆ, ಉತ್ತರ ಕನ್ನಡ ಜೀವ ವೈವಿಧ್ಯ ಪ್ರತಿಬಿಂಬಿಸುವ ಶಿಲ್ಪಕಲಾಕೃತಿಗಳು ಇಲ್ಲಿವೆ. ಆದರೆ, ಈಗ ನಿರ್ವಹಣೆ ಇಲ್ಲದೆ ಎಲ್ಲವೂ ತಮ್ಮ ಸೊಬಗು ಕಳೆದುಕೊಂಡಿವೆ. ಸುತ್ತ ಉಪಯೋಗಕ್ಕೆ ಬಾರದ ಗಿಡಗಂಟಿಗಳು ಬೆಳೆದು ನಿಂತು ಕಲಾಕೃತಿಗಳು ಕಾಣದಂತಾಗಿವೆ. ಇಲ್ಲಿ ನಿರ್ಮಾಣ ಮಾಡಲಾದ ಶೆಡ್ಗಳು ನಿರ್ವಹಣೆ ಇಲ್ಲದೆ ಹಾಳಾಗಿದೆ.
ಅನುದಾನದ ಕೊರತೆ: ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ದಿನಕ್ಕೆ 150ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರೆ, ಬೇಸಿಗೆಯಲ್ಲಿ ಮಕ್ಕಳಿಗೆ ರಜೆ ಇರುವುದರಿಂದ ಈ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು. ಹಿರಿಯರಿಗೆ ತಲಾ 30 ರೂ. ಹಾಗೂ ಮಕ್ಕಳಿಗೆ ತಲಾ 10 ರೂ. ಟಿಕೆಟ್ ದರವಿದೆ. ಇದೇ ಹಣ ಸಂಗ್ರಹದಿಂದ ಶಿಲ್ಪವನವನ್ನು ನಿರ್ವಹಣೆ ಮಾಡಲಾಗುತ್ತಿತ್ತು. ಮಳೆಗಾಲದ ಒಳಗಾಗಿ ಸಣ್ಣಪುಟ್ಟ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳುತ್ತಿದ್ದವು. ಈ ಬಾರಿ ಅನುದಾನದ ಕೊರತೆಯಿಂದ ಈ ಕಾರ್ಯ ನಡೆದಿಲ್ಲ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.
ರಾಕ್ ಗಾರ್ಡನ್ ನಿರ್ವಹಣೆ ಮಾಡಲು ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ಹಣ ಇಲ್ಲ. ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದ್ದರೂ ನಿರ್ವಹಣೆಯಿಲ್ಲದ ವನಕ್ಕೆ ಪ್ರವಾಸಿಗರೂ ಬರುತ್ತಿಲ್ಲ. ಇದು ಜನಾಕರ್ಷಣೆಯನ್ನು ಪಡೆದಿದ್ದ ಶಿಲ್ಪ ಕಲಾಕೃತಿಗಳನ್ನು ರಕ್ಷಿಸಿಕೊಳ್ಳಲು ಸಮಸ್ಯೆಯಾಗಿ ಪರಿಣಮಿಸಿದೆ.
ನಿರ್ವಹಣೆಯಿಲ್ಲದ ಶಿಲ್ಪವನವನ್ನು ನೋಡಲು ಯಾವ ಪ್ರವಾಸಿಯೂ ಬರುವುದಿಲ್ಲ. ಅರಣ್ಯ ಇಲಾಖೆ ತನ್ನ ಅನುದಾನವನ್ನು ಬಳಸಿಕೊಂಡು ವನ ನಿರ್ವಹಣೆ ಮಾಡಬೇಕು. ನಂತರದಲ್ಲಿ ವನಕ್ಕೆ ಆಗಮಿಸುವ ಪ್ರವಾಸಿಗರಿಂದ ಬರುವ ಹಣದಲ್ಲಿ ನಿರ್ವಹಣೆ ಮಾಡಬೇಕು. ತಕ್ಷಣದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಶಿಲ್ಪ ಕಲಾಕೃತಿಗಳನ್ನು ಕಾಪಾಡಿಕೊಳ್ಳಬೇಕು. | ಜಿ.ಎನ್. ಸುರೇಶ ಸ್ಥಳೀಯ ನಿವಾಸಿಅರಣ್ಯ ಇಲಾಖೆಯ ಅನುದಾನವನ್ನು ಶಿಲ್ಪವನ ನಿರ್ವಹಣೆಗೆ ಬಳಸಲು ಅವಕಾಶವಿಲ್ಲ. ನಿಧಾನವಾಗಿ ಪ್ರವಾಸಿಗರು ಹೆಚ್ಚಿದಂತೆ ಅದರಿಂದ ಬರುವ ಆದಾಯದಲ್ಲಿ ಇಡೀ ವನವನ್ನು ಸುಂದರಗೊಳಿಸಲಾಗುವುದು. | ಎಸ್.ಜಿ.ಹೆಗಡೆ ಡಿಎಫ್ಒ