ಮೈಸೂರು: ಅನೇಕ ಕವಿ ಮತ್ತು ಬರಹಗಾರರಿಗೆ ಸ್ಫೂರ್ತಿಯ ಸೆಲೆಯಾಗಿರುವ ಕುಕ್ಕರಹಳ್ಳಿ ಕೆರೆ ನಿರ್ವಹಣೆ ಕೊರತೆಯಿಂದಾಗಿ ಬಡವಾಗಿದೆ...!
ಕೆರೆ ದಂಡೆ ಮೇಲಿನ ಪಾದಚಾರಿ ಮಾರ್ಗದ ಆಸುಪಾಸಿನಲ್ಲಿ ಬೆಳೆದಿರುವ ದಟ್ಟಪೊದೆಯು ವಾಯು ವಿಹಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮಳೆಗಾಲದಲ್ಲಿ ಪ್ರತಿ ವರ್ಷ ಆಳೆತ್ತರಕ್ಕೆ ಬೆಳೆಯುವ ಈ ಅನಗತ್ಯ ಕಳೆಯನ್ನು ತೆಗೆದು ಸ್ವಚ್ಛಗೊಳಿಸುವ ಕಾಯಕವನ್ನು ಈ ಸಲ ಮೈಸೂರು ವಿಶ್ವವಿದ್ಯಾಲಯ ಮರೆತುಬಿಟ್ಟಿದೆ.
ಕರೊನಾ ನಿಯಂತ್ರಣಕ್ಕೆ ಜನಸಮೂಹ ಒಂದೆಡೆ ಸೇರದಂತೆ ಮಾಡಲು ಉದ್ಯಾನಗಳನ್ನು ಲಾಕ್‌ಡೌನ್ ಕಾಲದಲ್ಲಿ ಮುಚ್ಚಲಾಗಿತ್ತು. ಅಂತೆಯೇ ಈ ಕೆರೆಗೆ ಎರಡು ತಿಂಗಳ ಕಾಲ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಬೆಳಗ್ಗೆ ಹಾಗೂ ಸಂಜೆಯ ಅವಧಿಯಲ್ಲಿ ವಾಕಿಂಗ್ ಕೂಡ ಸ್ತಬ್ಧವಾಗಿತ್ತು. ಹೀಗಾಗಿ, ಜನರ ಓಡಾಟ ಇರಲಿಲ್ಲ. ಉತ್ತಮ ಮಳೆಯಿಂದಾಗಿ ಕೆರೆದಂಡೆ ಮೇಲೆ ಗಿಡಗಂಟಿಗಳಿಂದ ಕೂಡಿರುವ ಪೊದೆ ಬೆಳೆ ನಿಂತಿದೆ. ಇದೀಗ ಇದು ವಾಯುವಿಹಾರಿಗಳಿಗೆ ಅಪಥ್ಯವಾಗಿದೆ.
ಹುಣಸೂರು ರಸ್ತೆಗೆ ಹೊಂದಿಕೊಂಡಂತಿರುವ ಈ ಕೆರೆ 240 ಎಕರೆ ಪ್ರದೇಶ ಆವರಿಸಿಕೊಂಡಿದ್ದು, 3.50 ಕಿ.ಮೀ. ಸುತ್ತಳತೆಯ ಈ ಕೆರೆ ವಾಕಿಂಗ್ ಮಾಡುವವರ ನೆಚ್ಚಿನ ತಾಣ. ಹಸಿರಿನ ಸಿರಿಯೊಂದಿಗೆ ಪಕ್ಷಿಗಳ ಕಲರವ ಕಣ್ತುಂಬಿಕೊಳ್ಳಲು ನಿತ್ಯ ಬೆಳಗ್ಗೆ ಮತ್ತು ಸಂಜೆ ಸಾವಿರಾರು ವಾಯುವಿಹಾರಿಗಳು ಇಲ್ಲಿ ಭೇಟಿ ನೀಡುತ್ತಾರೆ. ಪ್ರಕೃತಿ ಸೌಂದರ್ಯವನ್ನು ನೋಡುತ್ತ ವಾಕಿಂಗ್ ಮಾಡುತ್ತಲೇ ಸ್ವಚ್ಛಗಾಳಿ, ಆಹ್ಲಾದಕರ ವಾತಾವರಣವನ್ನು ಆಸ್ವಾದಿಸುತ್ತಾರೆ. ಆದರೆ, ಪೊದೆಯು ಓಡುವವರಿಗೆ, ವಾಕಿಂಗ್ ಮಾಡುವವರಿಗೆ ತೊಂದರೆ ಉಂಟು ಮಾಡುತ್ತಿದೆ. ಇದು ಹಾವು, ಚೇಳು ಕಾಟಕ್ಕೂ ಕಾರಣವಾಗಿದೆ.
ಮಾನಸಗಂಗೋತ್ರಿಯ ಸೆನೆಟ್ ಭವನ ಎದುರಿನ ಭಾಗದಿಂದ ಕೆರೆ ಪ್ರವೇಶ ಮಾಡುವ ದಂಡೆಯಲ್ಲಿ ಪೊದೆ ಹೆಚ್ಚಾಗಿ ಬೆಳೆದಿದೆ. ಇದು ವಾಕಿಂಗ್ ಮಾಡುವವರಿಗೆ ತಗುಲುತ್ತಿದೆ. ಅಂತೆಯೆ, ವಿಶ್ವಮಾನವ ಜೋಡಿ ರಸ್ತೆಯ ಸಿಗ್ನಲ್ ಬಳಿಯಿಂದ ಕೆರೆ ಪ್ರವೇಶಿಸುವ ಜನರಿಗೆ ಇಂತಹ ಸಮಸ್ಯೆ ಎದುರಾಗುತ್ತಿದೆ. ಕಾಲುದಾರಿಯ ಸೇತುವೆ ಮೇಲೆಲ್ಲ ಗಿಡಗಂಟಿಯ ಬಳ್ಳಿ ಬೆಳೆದುಕೊಂಡಿದೆ. ವಾಯುವಿಹಾರಗಳಿಗೆ ಈ ಬಳ್ಳಿ ಬಡಿಯುತ್ತದೆ. ಹೀಗೆ ಕೆಲವೆಡೆ ಪೊದೆ ಬೆಳೆದುಕೊಂಡಿದೆ. ಒಬ್ಬರು ಓಡಲು, ತಿರುಗಾಡಲು ಅಂತಹ ಸಮಸ್ಯೆಯಿಲ್ಲ. ಆದರೆ, ಮೂರ‌್ನಾಲ್ಕು ಜನರು ಗುಂಪಾಗಿ ಮಾತನಾಡಿಕೊಂಡು ಹೋಗುವವರಿಗೆ ತೊಂದರೆಯಾಗುತ್ತಿದೆ ಎಂದು ಕೆರೆಯಲ್ಲಿ ನಿತ್ಯ ಓಡುವ ಅವಿನಾಶ್ ಹೇಳಿದರು.
ಪ್ರತಿ ವರ್ಷ ಮಳೆಗಾಲದಲ್ಲಿ ಹೀಗೆ ಪೊದೆ, ಅನಗತ್ಯ ಕಳೆ ಬೆಳೆಯುವುದು ಸಾಮಾನ್ಯ. ಅಕ್ಟೋಬರ್‌ನಲ್ಲಿ ಅದನ್ನು ತೆರವು ಮಾಡಿ ವಾಯುವಿಹಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುತ್ತಿತ್ತು. ಕಳೆದ ವರ್ಷವೂ ಈ ಕೆಲಸ ತಡವಾಗಿತ್ತು. ಇಲ್ಲಿಗೆ ಭೇಟಿ ನೀಡಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇದನ್ನು ತೆರವು ಮಾಡಿ ಸಮರ್ಪಕವಾಗಿ ನಿರ್ವಹಣೆ ಮಾಡಲು ಮೈಸೂರು ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದರು. ಬಳಿಕ ಈ ಕೆಲಸವಾಗಿತ್ತು. ಈ ಸಲ ಯಾಕೋ ಈ ಕೆಲಸವಾಗಿಲ್ಲ ಎಂದು ವಾಯುವಿಹಾರಿ ಎಂ.ಪುಷ್ಪಾ ಬೇಸರ ವ್ಯಕ್ತಪಡಿಸಿದರು.
----------
ಕೆರೆಯಲ್ಲಿ ಬೆಳೆದಿರುವ ಅನಗತ್ಯ ಪೊದೆ, ಸೊಪ್ಪು ತೆರವು ಕೆಲಸ ಈಗಾಗಲೇ ನಡೆದಿದೆ. ಇದು ಪೂರ್ಣಗೊಂಡ ಬಳಿಕ ಕೆರೆದಂಡೆ ಮೇಲಿನ ಪೊದೆ, ಗಿಡಗಂಟಿ ಕಡಿದು ಸ್ವಚ್ಛಗೊಳಿಸಲಾಗುವುದು. ಇನ್ನೊಂದು ವಾರದಲ್ಲಿ ಈ ಕೆಲಸ ಮುಗಿಯಲಿದೆ.
ಎಸ್.ಕೆ.ಮುಜಾವರ್, ಮೈಸೂರು ವಿವಿ ತೋಟಗಾರಿಕೆ ಇಲಾಖೆ ಅಧಿಕಾರಿ