ಜಿಲ್ಲೆ

ನಿರ್ವಹಣೆ ಇಲ್ಲದೆ ಸಸಿಗಳ ಸಾವು

ರೋಣ: ಸಸಿಗಳನ್ನು ನೆಡುವುದು, ಪೋಷಣೆ ಮಾಡುವುದು ಸೇರಿ ಪರಿಸರ ಸಂರಕ್ಷಣೆ ಕಾರ್ಯಗಳಿಗೆ ಸರ್ಕಾರ ಸಾವಿರಾರು ಕೋಟಿ ರೂ. ವ್ಯಯಿಸುತ್ತಿದೆ. ಆದರೆ, ಈ ಭಾಗದಲ್ಲಿ ನೆಟ್ಟ ಸಸಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಸಂರಕ್ಷಿಸದ ಕಾರಣ ಬಹುತೇಕ ಗಿಡಗಳು ಒಣಗಿ ಹೋಗುತ್ತಿವೆ.

ತಾಲೂಕಿನ ಮೆಣಸಗಿ ನವಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ವಲಯ ಅರಣ್ಯಾಧಿಕಾರಿಗಳು ಕಳೆದ ಜೂನ್​ನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ 4500 ಸಸಿಗಳನ್ನು ನೆಟ್ಟಿದ್ದಾರೆ. ಅವುಗಳ ರಕ್ಷಣೆಗಾಗಿ ಕೂಲಿ ಕಾರ್ವಿುಕರನ್ನು ನೇಮಿಸಿಕೊಂಡು ಪ್ರತಿ ತಿಂಗಳು ಸಾವಿರಾರು ರೂ. ವ್ಯಯಿಸಲಾಗಿದೆ. ಆದರೂ ಸಸಿಗಳ ನಿರ್ವಹಣೆ ಸಮರ್ಪಕವಾಗಿಲ್ಲ. ರಸ್ತೆಯ ಎರಡೂ ಬದಿಯಲ್ಲಿ ನೆಟ್ಟ ಸಸಿಗಳ ಸುತ್ತಲೂ ಜಾಲಿ ಕಂಟಿ, ಕಸ ಬೆಳೆದಿದೆ. ನಾಲ್ಕು ತಿಂಗಳಿನಿಂದ ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಬಹುತೇಕ ಸಸಿಗಳು ಸಾಯುತ್ತಿವೆ.

ಒಂದು ಸಸಿಗೆ 800 ರೂ. ಖರ್ಚು

ಸಸಿ ನೆಡಲು ಒಂದು ತಗ್ಗು ತೋಡುವುದು (275 ರೂ.), ಅದಕ್ಕೆ ಆಸರೆಯಾಗಿ ಕೋಲು ನೆಡುವುದು, ನೀರು ಹಾಕುವುದು ಸೇರಿ ನಿರ್ವಹಣೆಗೆ 525 ರೂ. ಸೇರಿ ಒಂದು ಸಸಿಗೆ 800 ರೂ. ಖರ್ಚು ಹಾಕಲಾಗಿದೆ. ಆದರೆ, ಬಹುತೇಕ ಸಸಿಗಳು ಒಣಗಿರುವುದನ್ನು ನೋಡಿದರೆ ಇದರಲ್ಲಿ ಭ್ರಷ್ಟಾಚಾರವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಮೆಣಸಗಿ ನವ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ ಜೂನ್​ನಲ್ಲಿ ರೋಣ ತಾಲೂಕಿನ ಮೆಣಸಗಿ ನವಗ್ರಾಮದಲ್ಲಿ ವಲಯ ಅರಣ್ಯಾಧಿಕಾರಿಗಳು 4500 ಸಸಿಗಳನ್ನು ನೆಟ್ಟಿದ್ದಾರೆ. ಇವುಗಳಲ್ಲಿ ಬಹುತೇಕ ಒಣಗಿವೆ. ಈ ವಿಷಯವನ್ನು ಅರಣ್ಯ ಇಲಾಖೆ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.| ಮಲ್ಲಪ್ಪ ಹೊಳಗಿ, ಮೆಣಸಗಿ ನವಗ್ರಾಮ ಗ್ರಾಪಂ ಕಾರ್ಯದರ್ಶಿ
ಮೆಣಸಗಿ ನವಗ್ರಾಮದಲ್ಲಿ ವಲಯ ಅರಣ್ಯ ಇಲಾಖೆಯಿಂದ ನೆಡಲಾದ ಬಹುತೇಕ ಬೇವಿನ ಸಸಿಗಳು ಒಣಗಿವುದು ನನ್ನ ಗಮನಕ್ಕೆ ಬಂದಿದೆ. ಅತಿಯಾದ ಮಳೆಯೇ ಇದಕ್ಕೆ ಕಾರಣ.| ರಾಜು ದೊಂಡಕರ, ಆರ್​ಎಫ್​ಒ
ಹೊಳೆಆಲೂರ ಭಾಗದ ನವಗ್ರಾಮಗಳಲ್ಲಿ ನೆಟ್ಟ ಸಸಿಗಳ ರಕ್ಷಣೆ ಜವಾಬ್ದಾರಿ ಆ ಇಲಾಖೆ ಅಧಿಕಾರಿಗಳ ಕರ್ತವ್ಯ. ಇದರಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.| ಜಗದೀಶ ಬ್ಯಾಡಗಿ, ಹೊಳೆಆಲೂರ ತಾಪಂ ಸದಸ್ಯ