ಜಿಲ್ಲೆ

ನಿರ್ವಹಣಾ ಶಾಸ್ತ್ರ ವಿಭಾಗದಲ್ಲಿ ಹೆಚ್ಚು ಉದ್ಯೋಗಾವಕಾಶ: ಡಾ.ಎಸ್.ಎನ್. ವಾಸುದೇವ ಪ್ರಸಾದ್ ಮಾಹಿತಿ

ಹಾಸನ: ನಿರ್ವಹಣಾ ಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರಸ್ತುತ ದಿನಗಳಲ್ಲಿ ಹೆಚ್ಚು ಉದ್ಯೋಗವಕಾಶಗಳು ಇದೆ ಎಂದು ಚನ್ನರಾಯಪಟ್ಟಣ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎನ್. ವಾಸುದೇವ ಪ್ರಸಾದ್ ಹೇಳಿದರು.

ನಗರದ ಆರ್.ಸಿ. ರಸ್ತೆ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಣಾ ಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಘಟಕದ ವತಿಯಿಂದ ಬುಧವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ನಿರ್ವಹಣಾ ಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಹೊಸ ಹೊಸ ನವ ಉದ್ಯಮಗಳ ಬಗ್ಗೆ ತಿಳಿದುಕೊಳ್ಳಬೇಕು. ಯುವಕರು ಸಾಧನೆಯ ಹಾದಿಯಲ್ಲಿ ಸಾಗಬೇಕಾದರೆ ಗುರುಗಳೊಂದಿಗೆ ಉತ್ತಮ ಬಾಂಧ್ಯವ ಇಟ್ಟುಕೊಳ್ಳಬೇಕು. ಗುರುಗಳು ನೀಡುವ ಮಾರ್ಗದರ್ಶನಗಳನ್ನು ಪಾಲನೆ ಮಾಡುವ ಮೂಲಕ ತಮ್ಮ ಪಠ್ಯದ ಶಿಕ್ಷಣದೊಂದಿಗೆ ಜೀವನಕ್ಕೆ ಬೇಕಾಗುವ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು. ಅಧ್ಯಯನ ಮಾಡಬೇಕಾದರೆ ಯುವಕರು ಒಂದು ನೀಲ ನಕ್ಷೆಯನ್ನು ಸಿದ್ಧ ಪಡಿಸಿಕೊಂಡು ಶಿಕ್ಷಣ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಇಂದಿಗೂ ಅನೇಕ ಯುವತಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಪೋಷಕರು ಗಂಡು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದಷ್ಟು ಹೆಣ್ಣು ಮಕ್ಕಳಿಗೆ ನೀಡುತ್ತಿಲ್ಲ. ಹಾಗಾಗಿ ಹೆಣ್ಣು ಮಕ್ಕಳು ತಮಗೆ ಇರುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ಶಿಕ್ಷಣದಲ್ಲಿ ಸಾಧನೆ ಮಾಡಿದರೆ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ. ಬಿಬಿಎ (ನಿರ್ವಹಣಾ ಶಾಸ್ತ್ರ) ಅತ್ಯಂತ ಉತ್ತಮ ವಿಷಯವಾಗಿದೆ ಎಂದು ಹೇಳಿದರು.

ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ.ಆರ್. ಸುರೇಶ್ ಕುಮಾರ್, ಐಕ್ಯೂಎಸಿ ಸಂಚಾಲಕ ಜಿ.ಆರ್. ಮೋಹನ್, ಉಪನ್ಯಾಸಕರಾದ ಕೆ.ಸಿ.ನವೀನ್, ಬಿಂದೂ, ಸ್ವಪ್ನಾ ಹಾಗೂ ಇತರರು ಹಾಜರಿದ್ದರು.