ಕವಿಚಕ್ರವರ್ತಿ ರನ್ನ  
ಜಿಲ್ಲೆ

ನಿರ್ಲಕ್ಷ್ಯಕ್ಕೆ ಗುರಿಯಾದ ಸಾಂಸ್ಕೃತಿಕ ಲೋಕ…!

ಸಂತೋಷ ದೇಶಪಾಂಡೆ
ಬಾಗಲಕೋಟೆ: ಕೋಟೆನಾಡಿನ ಹಿರಿಯ ಕಲಾವಿದ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಪಿ.ಬಿ.ಧುತ್ತರಗಿ ಹಾಗೂ ಹಳೇಗನ್ನಡ ದೃವ ತಾರೆ ಕವಿ ರನ್ನನ ಹೆಸರಿನ ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನಗಳು ಚಟುವಟಿಕೆಗಳು ಇಲ್ಲವಾಗಿವೆ. ಸರ್ಕಾರದಿಂದ ಪ್ರತಿವರ್ಷವು ಅನುದಾನ ಬಿಡುಗಡೆಯಾದರು ಬಳಕೆಯಾಗದೆ ಖಜಾನೆಯಲ್ಲಿ ಕಾಂಚನ ಕೊಳೆಯ ತೊಡಗಿದೆ. ಕನ್ನಡ ದೃವತಾರೆಗಳು ಹೊಸ ಯುಗದಲ್ಲಿ ಮರೆಯಾಗುವ ಲಕ್ಷಣ ಗೋಚರಿಸಿವೆ.

ಪಿ.ಬಿ.ಧುತ್ತರಗಿ ನಾಟಕಗಳ ಮೂಲಕ ರಾಜ್ಯದ ಗಮನ ಸೆಳೆದವರು. ಕಷ್ಟ, ನಷ್ಟದಲ್ಲಿಯೂ ರಂಗಭೂಮಿ ಸೇವೆಯಿಂದ ಹಿಂದೆ ಸರಿಯಲಿಲ್ಲ. ಅವರ ಬರೆದ ಸಂಪತ್ತಿಗೆ ಸವಾಲ್ ನಾಟಕ ವರ ನಟ ಡಾ.ರಾಜಕುಮಾರ ಅಭಿನಯಿಸಿ ಖ್ಯಾತಿ ಹೊಂದಿತು. ಇಂತಹ ಮಹಾನ್ ವ್ಯಕ್ತಿ ಹೆಸರು ಮುಂದಿನ ಪೀಳಿಗೆ ಜನರಿಗೆ ಪರಿಚಯಿಸುವ ಉದ್ದೇಶದಿಂದ ಒಂದು ದಶಕದ ಹಿಂದೆ ಪಿ.ಬಿ.ಧುತ್ತರಗಿ ಪ್ರತಿಷ್ಠಾನ ಸ್ಥಾಪಿಸಲಾಯಿತು. ಆರಂಭದಲ್ಲಿ ಇದ್ದ ಉತ್ಸಾಹ ಇದೀಗ ಉಳಿದಿಲ್ಲ. ಚಟುವಟಿಕೆಗಳು ಸಂಪೂರ್ಣ ಗೌಣವಾಗಿವೆ. ೨೦೨೨-೨೩, ೨೦೨೩-೨೪, ೨೦೨೪-೨೦೨೫ ಸಾಲಿನ ಚಟುವಟಕೆಗಳು ನಡೆದಿಲ್ಲ.
ಪ್ರತಿ ವರ್ಷ ಸರ್ಕಾರ ೮ ಲಕ್ಷ ರೂ. ವರೆಗೆ ಕಂತಿನಲ್ಲಿ ಪ್ರತಿಷ್ಠಾನಕ್ಕೆ ಹಣ ನೀಡುತ್ತದೆ. ೬೫ ಲಕ್ಷ ರೂ. ಅನುದಾನ ಖಾಜನೆಯಲ್ಲಿಯೇ ಉಳಿದಿದೆ.

ದರಲ್ಲಿ ಧುತ್ತರಗಿ ಅವರ ನಾಟಕೋತ್ಸವ, ಉತ್ತಮ ನಟ, ನಟಿ ಪ್ರಶಸ್ತಿ ನೀಡಿ ತಲಾ ೧೦ ಸಾವಿ ರೂ. ನಗದು ಧನ ನೀಡಲಾಗುತ್ತದೆ. ಬಾಗಲಕೋಟೆ ಜಿಲ್ಲೆ ಅಷ್ಟೆ ಅಲ್ಲದೆ ರಾಜ್ಯ ವ್ಯಾಪ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶವಿದೆ. ದುರಂತ ಅಂದರೇ ಜಿಲ್ಲೆಯಲ್ಲಿಯೂ ಕೂಡಾ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ ಎನ್ನುವುದು ನೋವಿನ ಸಂಗತಿ. ಸಾಕಷ್ಟು ಖರ್ಚು ಮಾಡಿ ಪಿ.ಬಿ.ಧುತ್ತರಗಿ ಅವರ ೧೨ ನಾಟಕಗಳ ೩ ಸಂಪುಟಗಳನ್ನು ಇಲಾಖೆ ಮುದ್ರಿಸಿದೆ. ಇದು ವರೆಗೂ ಬಿಡುಗಡೆ ಭಾಗ್ಯ ಕಂಡಿಲ್ಲ. ಇನ್ನು ಅನೇಕ ವರ್ಷಗಳಿಂದ ಸರಿಯಾದ ಕ್ರಿಯಾ ಯೋಜನೆ ರೂಪಿಸದ ಪರಿಣಾಮ ಧುತ್ತರಗಿ ಜನ ಮಾನಸದಿಂದ ದೂರವಾದರಾ? ಪ್ರಶ್ನೆ ಕಾಡ ತೊಡಗಿದೆ.

ಹಳೇಗನ್ನಡ ಅಪಾರ ಕೊಡುಗೆ ನೀಡಿದ ಕವಿ ಚಕ್ರವರ್ತಿ ರನ್ನ ಹೆಸರು ಉಳಿಸಲು ರನ್ನ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಲಾಗಿದೆ. ಪ್ರತಿ ವರ್ಷವು ಇದಕ್ಕೂ ೮ ಲಕ್ಷ ರೂ. ಅನುದಾನ ದೊರೆಯುತ್ತದೆ. ೯೭ ಲಕ್ಷ ರೂ. ಅನುದಾನ ಖಜಾನೆಯಲ್ಲಿ ಕೊಳೆಯುತ್ತಿದ್ದು, ಇದರಲ್ಲಿ ರನ್ನನ ವಿಚಾರ ಸಂಕಿರಣ, ಹಳೇಗನ್ನಡ ಸಂಶೋಧನೆ ಮತ್ತು ಅಧ್ಯಯನ, ಪ್ರಶಸ್ತಿ ಕೊಡಮಾಡುವುದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಳೇ ಕನ್ನಡ ತರಬೇತಿ ಸೇರಿದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕಳೆದ ೬ ವರ್ಷಗಳಿಂದ ಚಟುವಟಿಗಳು ಸ್ತಬ್ಧಗೊಂಡಿವೆ. ಪ್ರಶಸ್ತಿಗಳನ್ನು ಕೂಡಾ ನೀಡಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ. ಇಂದು, ನಾಳೆ ಅಂತ ಕಾಳ ಕಳೆಯುವುದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದೂಡುತ್ತಿದೆ. ಇದರಿಂದ ಕವಿ ಚಕ್ರವರ್ತಿ ರನ್ನ ಮೆಲ್ಲನೆ ಮರೆಯಾಗುತ್ತಿದ್ದಾನೆ ಎನ್ನುವುದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪ.

ಇನ್ನು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ೬ ತಿಂಗಳು ಗತಿಸಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಬರುವ ಪ್ರತಿಷ್ಠಾನಗಳಿಗೆ ಹೊಸ ಸದಸ್ಯರನ್ನು ನೇಮಕವಾಗಿಲ್ಲ. ಕಾರ್ಯಚಟುವಟಿಕೆಗಳ ರೂಪಿಸುತ್ತಿಲ್ಲ. ಇದು ಸಾಂಸ್ಕೃತಿ ಲೋಕದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಜಿಲ್ಲೆಯಲ್ಲಿನ ಪಿ.ಬಿ.ಧುತ್ತರಗಿ, ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನಕ್ಕೆ ಸಮಿತಿ ರಚನೆಯಾಗಿಲ್ಲ. ಸರ್ಕಾರದ ಹಂತದಲ್ಲಿ ಪ್ರಕ್ರಿಯೆ ನಡೆಯುತ್ತೀವೆ. ಕಾರ್ಯಚಟುವಟಿಗಳು, ಅನುದಾನ ಬಳಕೆ ಬಗ್ಗೆ ಸಭೆ ನಡೆಸಲಾಗುವುದು. ಕ್ರಿಯಾಯೋಜನೆ ರೂಪಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಿಲ್ಲೆಯ ಸಾಂಸ್ಕೃತಿಕ ತಾರೆಗಳಾದ ಧುತ್ತರಗಿ, ಕವಿ ರನ್ನನ ಕೀರ್ತಿ ಹೆಚ್ಚಿಸಲು ವಿಶೇಷ ಕಾಳಜಿ ವಹಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ತಿಳಿಸಿದ್ದಾರೆ.