ಜಿಲ್ಲೆ

ನಿರ್ಲಕ್ಷೃ ತೋರುವ ಅಧಿಕಾರಿಗಳ ವಿರುದ್ಧ ಕ್ರಮ

ಚಿತ್ರದುರ್ಗ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಹಾಯಧನ ಸಹಿತ ಸಾಲ ನೀಡುವ ಸಾಮಾಜಿಕ ಭದ್ರತಾ ಯೋಜನೆಗಳು ಸಾಕಷ್ಟು ಲ್ಯಾಪ್ಸ್ ಆಗುತ್ತಿವೆ. ವಿಳಂಬ ಧೋರಣೆಯೇ ಇದಕ್ಕೆ ಕಾರಣ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಲೀಡ್ ಬ್ಯಾಂಕ್‌ನ ಜಿಲ್ಲಾಮಟ್ಟದ ಸಲಹಾ ಮತ್ತು ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಒಟ್ಟಾಗಿ ಕೆಲಸ ನಿರ್ವಹಿಸದಿದ್ದರೆ, ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುವುದಿಲ್ಲ. ಆದ್ದರಿಂದ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಮಾಡುವ ಅಧಿಕಾರಿ, ಬ್ಯಾಂಕ್ ಶಾಖೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ರೈತರು ಹಾಗೂ ಅರ್ಹರೆಲ್ಲರ ಮನೆಬಾಗಿಲಿಗೆ ತಲುಪಿಸಬೇಕು. ಸತತ 3 ವರ್ಷಗಳಿಂದಲೂ ಅನೇಕ ಅರ್ಜಿಗಳು ಬಾಕಿ ಉಳಿದಿವೆ. ಹಿಂದಿನ ಸಭೆಯಲ್ಲಿ ಸೂಚಿಸಿದ್ದರೂ ಒಂದು ಅರ್ಜಿ ವಿಲೇವಾರಿ ಆಗಿಲ್ಲ. ಶೀಘ್ರ ಎಲ್ಲಾ ಅರ್ಜಿ ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿದರು.

ವಿವಿಧ ನಿಗಮಗಳಡಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಜೀವನಮಟ್ಟ ಸುಧಾರಣೆ ಸಂಬಂಧ ಸಹಾಯಧನ, ರೈತರಿಗೆ ಸಾಲ ಸೌಲಭ್ಯ, ಬೆಳೆವಿಮೆ ಪರಿಹಾರ ಸೇರಿ ಹಲವು ಸ್ವಾವಲಂಬಿ ಯೋಜನೆಗಳಿದ್ದು, ತ್ವರಿತವಾಗಿ ಅರ್ಜಿ ವಿಲೇವಾರಿಗೊಳಿಸಿ, ಫಲಾನುಭವಿಗಳಿಗೆ ನೆರವಾಗಿ ಎಂದು ಸೂಚಿಸಿದರು.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 2018ರಿಂದ ಈವರೆಗೆ ಜಿಲ್ಲೆಯಲ್ಲಿ ಇನ್ನೂ 283 ಅರ್ಜಿಗಳು ಬ್ಯಾಂಕ್ ವ್ಯವಸ್ಥಾಪಕರ ಲಾಗಿನ್‌ನಲ್ಲಿ ಬಾಕಿ ಉಳಿದಿವೆ. ಇದರಿಂದಾಗಿ ರೈತರಿಗೆ ಪರಿಹಾರದ ಮೊತ್ತ ಪಾವತಿಯಾಗಿಲ್ಲ. ಎರಡ್ಮೂರು ದಿನಗಳಲ್ಲೇ ವಿಲೇವಾರಿ ಮಾಡಬಹುದು. ಪರಿಹಾರದ ಹಣ ವಾಪಾಸು ಹೋದರೆ, ಯಾರನ್ನೂ ಕೇಳಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸಭೆಗೆ ಮಾಹಿತಿ ನೀಡಿದರು.

ಜಿಪಂ ಸಿಇಒ ಎಂ.ಎಸ್.ದಿವಾಕರ್ ಪ್ರತಿಕ್ರಿಯಿಸಿ, ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ, ಶೀಘ್ರ ರೈತರಿಗೆ ಬೆಳೆ ವಿಮೆ ಹಣ ಪಾವತಿಯಾಗುವಂತೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.

  • ಎನ್‌ಆರ್‌ಎಲ್‌ಎಂ ಸಾಧನೆಗೆ ಮೆಚ್ಚುಗೆ: ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ನಿಂದ 60 ಕೋಟಿ ರೂ. ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ನೀಡಲಾಗಿದೆ. ಸ್ತ್ರೀಯರು ಸ್ವಾಭಿಮಾನದಿಂದ ಆದಾಯ ಹೆಚ್ಚಿಸಿಕೊಂಡು, ಅವರದೇ ಬ್ಯಾಂಕಿಂಗ್ ವ್ಯವಸ್ಥೆ ಮಾಡಿಕೊಂಡಿರುವುದು ಆಶಾದಾಯಕ ಸಂಗತಿ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಬ್ಯಾಂಕ್ ಶಾಖೆ ತೆರೆಯಲು ಸೂಚನೆ: ಹಿರಿಯೂರು ತಾಲೂಕಿನ ಶೇಷಪ್ಪನಹಳ್ಳಿ ಹಾಗೂ ಯಲ್ಲದಕೆರೆ ವ್ಯಾಪ್ತಿಯ ಸುಮಾರು 36 ಕಿ.ಮೀ ವ್ಯಾಪ್ತಿಯಲ್ಲಿ ಒಂದೂ ಬ್ಯಾಂಕ್ ಶಾಖೆ ಇಲ್ಲ. ಈ ಹಿಂದೆ ಯಲ್ಲದಕೆರೆಯಲ್ಲಿದ್ದ ಶಾಖೆಯೊಂದನ್ನು ಮುಚ್ಚಲಾಗಿದೆ. ಜನರ ಅನುಕೂಲಕ್ಕಾಗಿ ಶಾಖೆ ತೆರೆಯುವ ಅಗತ್ಯವಿದೆ ಎಂದು ಎನ್‌ಆರ್‌ಎಲ್‌ಎಂ ಅಧಿಕಾರಿ ಭೋಜರಾಜ ಸಚಿವರಿಗೆ ಮನವಿ ಮಾಡಿದರು. ಕೂಡಲೇ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಅಥವಾ ಡಿಸಿಸಿ ಬ್ಯಾಂಕ್‌ನವರು ಶಾಖೆ ತೆರೆಯಲು ಸಚಿವರು ಸೂಚಿಸಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್, ಆರ್‌ಬಿಐನ ಸುಪ್ರಿಯಾ ಬ್ಯಾನರ್ಜಿ, ನಬಾರ್ಡ್‌ನ ಕವಿತಾ ಎಸ್. ಶಶಿಧರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಯ್ಯ, ದಾವಣಗೆರೆಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಶ್ರೀನಿವಾಸ್, ಎಸ್‌ಬಿಐನ ರಂಜನ್‌ಕುಮಾರ್ ಇತರರಿದ್ದರು. ಬಾಕ್ಸ್ ನೋಂದಣಿಗೆ ಪ್ರೋತ್ಸಾಹಿಸಿ
    ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾಗೆ ಅರ್ಹರು ನೋಂದಾಯಿಸಿಕೊಳ್ಳಲು ಪ್ರೋತ್ಸಾಯಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪಿಎಂಜೆಜೆಬಿವೈಗೆ ಜಿಲ್ಲೆಯಲ್ಲಿ 64 ಸಾವಿರ, ಪಿಎಂಎಸ್‌ಬಿವೈಗೆ 2.12 ಲಕ್ಷ ನೋಂದಣಿ ಗುರಿ ನಿಗದಿಯಾಗಿದ್ದು, ಜೂನ್ ಅಂತ್ಯದೊಳಗೆ ಗುರಿ ಸಾಧಿಸಲಾಗುವುದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್ ಮಾಹಿತಿ ನೀಡಿದರು. ಬಾಕ್ಸ್ ಕೃಷಿ ಕ್ಷೇತ್ರಕ್ಕೆ 3,608 ಕೋಟಿ ವಿತರಣೆ
    ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಆದ್ಯತಾ ವಲಯಕ್ಕೆ ಎಸಿಪಿಯಡಿ 2022-23ನೇ ಸಾಲಿನಲ್ಲಿ ನಿಗದಿಯಾಗಿದ್ದ 3,221 ಕೋಟಿ ರೂ. ಗುರಿಯಲ್ಲಿ ಮಾರ್ಚ್ ಅಂತ್ಯಕ್ಕೆ 3,608 ಕೋಟಿ ರೂ. ನೀಡಲಾಗಿದ್ದು, ಶೇ 112ರಷ್ಟು ಹಾಗೂ ಎಂಎಸ್‌ಎಂಇಯ 665 ಕೋಟಿ ರೂ. ಗುರಿಯಲ್ಲಿ 711 ಕೋಟಿ ರೂ. ವಿತರಣೆಯಾಗಿ ಶೇ 106ರಷ್ಟು ಗುರಿ ಸಾಧನೆಯಾಗಿದೆ. ಆದ್ಯತಾ ಮತ್ತು ಆದ್ಯತೆಯೇತರ ಸೇರಿ ಒಟ್ಟು 6,341 ಕೋಟಿ ರೂ.ನಲ್ಲಿ 5,905 ಕೋಟಿ ರೂ. ವಿತರಣೆಯಾಗಿ ಶೇ 93 ಗುರಿ ಸಾಧನೆಯಾಗಿದೆ ಎಂದು ಲೀಡ್ ಬ್ಯಾಂಕ್ ಮಾಹಿತಿ ನೀಡಿದೆ. (ಸಿಟಿಡಿ 20 ಮಿನಿಸ್ಟರ್)
    ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಲೀಡ್ ಬ್ಯಾಂಕ್‌ನ ಜಿಲ್ಲಾಮಟ್ಟದ ಸಲಹಾ ಮತ್ತು ಪರಿಶೀಲನಾ ಸಭೆಯಲ್ಲಿ ಎ.ನಾರಾಯಣಸ್ವಾಮಿ ಮಾತನಾಡಿದರು. ಎಂ.ಎಸ್.ದಿವಾಕರ್, ತಿಪ್ಪೇಶ್, ಮಹದೇವಯ್ಯ, ಶ್ರೀನಿವಾಸ್, ರಂಜನ್‌ಕುಮಾರ್ ಇತರರಿದ್ದರು.