ಶಿಕಾರಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಪ್ರಾಚಾರ್ಯ ಡಿ.ಎಚ್.ರಮೇಶ್, ಆರ್.ಕೆ.ವಿನಯ್, ಬಿ.ವಿ.ಸೌಮ್ಯಾ, ಡಾ. ಪಟ್ಟಣ ರಾಕೇಶ್, ಡಾ. ಸುಮಾ, ವಿದ್ಯಾರ್ಥಿಗಳು. 
ಜಿಲ್ಲೆ

ನಿರ್ಲಕ್ಷೃ ತೋರದೆ ಜಾನಪದ ಕಲೆಗಳನ್ನು ಉಳಿಸಿ

ಶಿಕಾರಿಪುರ: ಜಾನಪದ ನಮ್ಮ ಸಂಸ್ಕೃತಿ. ಆಚಾರ, ವಿಚಾರ, ನಡೆ-ನುಡಿಗಳಲ್ಲಿ ಜಾನಪದದ ಸೊಗಡು ಹಾಸುಹೊಕ್ಕಾಗಿದೆ. ಜಾನಪದ ನಮ್ಮ ಉಸಿರು, ನಮ್ಮ ಹೆಸರು ಮತ್ತು ನಮ್ಮ ಬದುಕು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಿ.ಎಚ್.ರಮೇಶ್ ಹೇಳಿದರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಹಿರಿಯರು ನಮಗೆ ಜಾನಪದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಳುವಳಿಯಾಗಿ ಬಿಟ್ಟುಹೋಗಿದ್ದಾರೆ. ಇಂದಿಗೂ ನಮ್ಮ ಹಳ್ಳಿಗಳಲ್ಲಿ ನಾವು ಜಾನಪದದ ಹಿರಿಮೆಯನ್ನು ಅವರ ಬದುಕಿನಲ್ಲಿ ಕಾಣಬಹುದು. ನಾವು ಅತ್ಯಂತ ಶ್ರೇಷ್ಠವಾದ ಸಂಸ್ಕೃತಿಯನ್ನು ಉಪೇಕ್ಷೆ ಮಾಡದೆ ಉಳಿಸಿ ಬೆಳೆಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಎಷ್ಟೋ ಜಾನಪದ ಕ್ರೀಡೆಗಳು ಆಚಾರ, ವಿಚಾರಗಳು, ಕಲೆಗಳು ನಮ್ಮಿಂದ ಮರೆಯಾಗಿವೆ. ಜಾನಪದ ಕ್ರೀಡೆಗಳು ನಮ್ಮ ಮನೆಯ ಆಟಗಳಿದ್ದಂತೆ. ಅವುಗಳು ನಮಗೆ ಆರೋಗ್ಯ, ಆನಂದವನ್ನು ಕೊಡುತ್ತವೆ. ನಮ್ಮ ಜಾನಪದ ವಸ್ತ್ರವಿನ್ಯಾಸ ವಿಶ್ವಮಾನ್ಯವಾಗಿವೆ. ಜಾನಪದ ಗೀತೆಗಳು, ಗೀಗೀ ಪದಗಳು, ಸುಗ್ಗಿಯ ಹಾಡು, ಹಸೆಯ ಹಾಡು, ನೃತ್ಯರೂಪಕಗಳು ನಮ್ಮ ನೆಲದ ಸಂಸ್ಕೃತಿಯ ಪ್ರತಿಬಿಂಬ ಎಂದು ಹೇಳಿದರು. ಈ ಕಾರ್ಯಕ್ರಮ ಅಕ್ಷರಶಃ ಜನಪದ ಜಾತ್ರೆಯಾಗಿಯೇ ಕಂಗೊಳಿಸುತ್ತಿದೆ. ಸಾಂಪ್ರದಾಯಿಕ ಉಡುಪುಗಳಿಂದ ನಮ್ಮ ವಿದ್ಯಾರ್ಥಿ ಗಳು ಆಕರ್ಷಕವಾಗಿ ಕಾಣುತ್ತಿದ್ದಾರೆ. ಎತ್ತಿನಗಾಡಿಗಳ ಸವಾರಿ ರೋಮಾಂಚನ ಉಂಟುಮಾಡುತ್ತಿವೆ. ಇಲ್ಲಿನ ಈ ಕಾರ್ಯಕ್ರಮದ ಪ್ರತಿಕ್ಷಣವೂ ಜಾನಪದದ ಹಿರಿಮೆ ಸಾರುತ್ತಿವೆ. ಹಿರಿಯರು ನಮಗೆ ಶ್ರೇಷ್ಠತೆಯನ್ನು ಬಿಟ್ಟು ಹೋಗಿದ್ದಾರೆ ಎಂದರು. ಜಾನಪದ ಜಾತ್ರೆಯಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರು ಸಾಂಪ್ರದಾಯಿಕ ಉಡುಪು ಧರಿಸಿ ಕಂಗೊಳಿಸಿದರು. ಕೆಲವರು ಎತ್ತಿನ ಗಾಡಿಗಳ ಮೇಲೆ ಬಂದು ಗಮನಸೆಳೆದರು. ಆರ್.ಕೆ.ವಿನಯ್, ಬಿ.ವಿ.ಸೌಮ್ಯಾ, ಡಾ. ಪಟ್ಟಣ ರಾಕೇಶ್, ಡಾ. ಸುಮಾ, ಸುಮಂಗಲಾ, ಬಿ.ಎನ್.ಸುನಿಲ್ಕುಮಾರ್, ಡಾ. ಅಜಯ್ಕುಮಾರ್, ಡಾ. ರಾಘವೇಂದ್ರ, ಡಾ. ಪಾಂಡುರಂಗ, ಡಾ. ರೂಪಾ, ಆಶಾರಾಣಿ ಇತರರಿದ್ದರು.

ನಾವು ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದ್ದೇವೆ. ಆದರೆ ನಮ್ಮ ಬೇರು ಇರುವುದು ಈ ಮಣ್ಣಿನ ಸಂಸ್ಕೃತಿಯಲ್ಲಿ. ಇಲ್ಲಿ ಅಕ್ಷರಶಃ ಸಾಂಸ್ಕೃತಿಕ ಜಗತ್ತು ತೆರೆದುಕೊಂಡಿದೆ. ನಮ್ಮ ಜಾನಪದ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿರಲಿ. ಪ್ರತಿ ಹಬ್ಬಗಳು, ಜಾತ್ರೆ, ಉತ್ಸವಗಳು ನಮ್ಮ ಹೆಮ್ಮೆಯ ಸಂಕೇತ. ಎಲರೂ ಒಂದೇ ಅನ್ನುವುದು ನಮ್ಮ ಹಿರಿಯರ ಆಶಯವಾಗಿತ್ತು. ಡಿ.ಎಚ್. ರಮೇಶ್, ಪದವಿ ಕಾಲೇಜಿನ ಪ್ರಾಚಾರ್ಯ ಜಾನಪದ ಗೀತೆಗಳು ನಮ್ಮ ಬದುಕಿನ ಹಾಡುಗಳು, ನಮ್ಮ ಭಾವದ ಹಾಡುಗಳು. ನಮ್ಮ ಮನದಲ್ಲಿ ಆವರಿಸಿಕೊಂಡು ಸದಾ ಗುನುಗುವಂತೆ ಮಾಡುತ್ತವೆ. ಅವುಗಳು ಬಾಯಿಂದ ಬಾಯಿಗೆ ಹರಿದು ಬಂದು ಈ ಮಣ್ಣಿನ ಸೊಗಡನ್ನು ಜೀವಂತವಾಗಿ ಇಟ್ಟಿವೆ. ಯುವರಾಜ್, ಜಾನಪದ ಗಾಯಕ