ಆನಂದಪುರ: ಸಮೀಪದ ಯಡೇಹಳ್ಳಿಯಲ್ಲಿ ಕೈಗೊಂಡಿರುವ ಚರಂಡಿ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಡಿ 30 ಲಕ್ಷ ರೂ. ವೆಚ್ಚದಲ್ಲಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದ ಮುಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದೇ ವೇಳೆ ರಸ್ತೆಯ ಎರಡು ಬದಿಯಲ್ಲೂ ಬಾಕ್ಸ್ ಚರಂಡಿ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಹಂತದಲ್ಲಿಯೇ ಚರಂಡಿ ಕುಸಿದಿದೆ. ಕ್ಯೂರಿಂಗ್ ಸಹ ನಡೆಸುತ್ತಿಲ್ಲ. ಚರಂಡಿಯ ತಳಭಾಗ ಬಿರುಕು ಬಿಟ್ಟಿದ್ದು, ಸಿಮೆಂಟ್ ಮತ್ತು ಮರಳು ಬೇರೆ ಬೇರೆಯಾಗಿ ಉದುರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸಿಮೆಂಟ್ ಅನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಎಂ ಸ್ಯಾಂಡ್ ಬಳಸಲಾಗುತ್ತಿದ್ದು, ಗುತ್ತಿಗೆದಾರರು ಸ್ಥಳದಲ್ಲಿ ಸಿಮೆಂಟ್ ಮತ್ತು ಮರಳು ಮಿಶ್ರಣ ಮಾಡುತ್ತಿಲ್ಲ. ದೂರದಲ್ಲಿ ಎಲ್ಲೋ ಮಿಕ್ಸಿಂಗ್ ಯಂತ್ರ ಬಳಸಿ ಕಾಂಕ್ರೀಟ್ ಸಿದ್ಧ ಪಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರ ಈ ಸಂಬಂಧ ಸಭೆ ನಡೆಸಿದ ಗ್ರಾಮಸ್ಥರು, ಕೂಡಲೇ ಗುಣಮಟ್ಟದ ಕಾಮಗಾರಿ ಕೈಗೊಳ್ಳದಿದ್ದಾರೆ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.