ಜಿಲ್ಲೆ

ನಿರ್ದೇಶಕರ ಮನೆಗೆ 4 ಬಾರಿ ಹೋಗಿದ್ದಕ್ಕೆ ಗೆಲುವು: ಜಿಲ್ಲಾ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ

ಹಾಸನ: ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷರ ಚುನಾವಣೆಗೆ ಕೆಲ ದಿನಗಳು ಇರುವಂತೆ ನಿರ್ದೇಶಕರ ಮನೆಗಳಿಗೆ ನಾಲ್ಕು ಬಾರಿ ತೆರಳಿ ಮತಯಾಚನೆ ಮಾಡಿದ ಪರಿಣಾಮ ನಮ್ಮ ತಂಡ ಗೆಲುವು ಸಾಧಿಸಿದೆ ಎಂದು ಸಂಘದ ನೂತನ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ ತಿಳಿಸಿದರು.

ಚುನಾವಣೆ ಮುಗಿದ ಬಳಿಕ ಯಾರನ್ನು ಯಾರೂ ದೂಷಿಸುವುದು ಬೇಡ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗೋಣ. ಕೆಲವರು ಪರೋಕ್ಷವಾಗಿ ಸಹಕಾರ ನೀಡಿದರು. ಅವರಿಗೂ ಬೆಂಬಲ ನೀಡಿದರು. ರಾಜಕೀಯ ಧ್ರುವೀಕರಣ ಆದಾಗ ಅವರ ಬೆಂಬಲಿಗರು ಬರುವುದು ಸಹಜ. ನಮ್ಮ ತಂಡದ ಸದಸ್ಯರು ಯಾವುದೇ ಮತದಾರರಿಗೆ ಆಮಿಷವನ್ನು ಒಡ್ಡಲ್ಲ. ಬದಲಿಗೆ ನಿರ್ದೇಶಕರ ಮನೆಗೆ ನಾಲ್ಕು ಬಾರಿ ತೆರಳಿ ಮತಯಾಚನೆ ಮತ್ತು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗೆಲುವು ನಮ್ಮದಾಯಿತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಂದಿನ ದಿನಗಳಲ್ಲಿ ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಎಲ್ಲ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಸರ್ಕಾರಿ ನೌಕರರ ಚುನಾವಣೆ ಪೂರ್ವದಲ್ಲಿ ಎಲ್ಲ ರಾಜಕೀಯ ನಾಯಕರನ್ನು ಭೇಟಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಲು ಕೋರಲಾಗಿದೆ. ಆದರೆ ಚುನಾವಣೆಯಲ್ಲಿ ಸೋತವರು ರಾಜಕೀಯ ಮೇಲಾಟದ ಕಾರಣದಿಂದ ನಮಗೆ ಸೋಲುಂಟಾಯಿತು ಎಂದು ಆರೋಪ ಮಾಡುವುದು ಸರಿಯಲ್ಲ ಎಂದರು.

ಮುಂದಿನ ದಿನಗಳಲ್ಲಿ ನಾವು ಸಂಘದ ಕೆಲಸ ಮಾಡಬೇಕು ಎಂದು ಎಲ್ಲ ಪಕ್ಷಗಳ ರಾಜಕಾರಣಿಗಳ ಸಹಕಾರ ಬೇಕು. ಅವರು ಅನುದಾನ ನೀಡಿದರೆ ಅಭಿವೃದ್ಧಿ ಮಾಡಬಹುದು. ಇನ್ನು ಶಾಸಕರ ನಿಧಿಯಿಂದ ಅಭಿವೃದ್ಧಿಗೆ 5 ಲಕ್ಷ ರೂ. ಕೊಡುವುದಾಗಿ ಹೇಳಿದ್ದಾರೆ. ಸಮುದಾಯ ಭವನ, ಹಾಲ್, ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಈ ಬಾರಿಯ ಚುನಾವಣೆಯಲ್ಲಿ ಎರಡು ಕಡೆಯಿಂದಲೂ ರಾಜಕೀಯ ಪ್ರವೇಶ ಆಗಿರುವುದು ದುರದೃಷ್ಟಕರ ಎಂದು ಹೇಳಿದರು.

ರಾಜಕೀಯ ಹೊರತಾಗಿ ಸಂಘದ ಅಭಿವೃದ್ಧಿಗೆ ಎಲ್ಲರೂ ಕೆಲಸ ಮಾಡುವುದಾಗಿ ಮತ್ತು ಗೆಲುವಿಗೆ ಸಹಕರಿಸಿದ ಸರ್ಕಾರಿ ನೌಕರರು, ನಿರ್ದೇಶಕರು ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆ ಎಲ್ಲರ ಸಲಹೆ, ಸಹಕಾರ ಪಡೆದು ಕೆಲಸ ಮಾಡುತ್ತೇನೆ. ಆದರೆ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ರಾಜಕೀಯ ಹೆಚ್ಚು ಸದ್ದು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಈ. ಕೃಷ್ಣೇಗೌಡ, ಖಜಾಂಚಿ ಹೇಮಂತ್ ಕುಮಾರ್, ಆಶಾ, ಗೋಪಾಲಕೃಷ್ಣ, ಕುಮಾರ್, ಲಕ್ಷ್ಮೀಕಾಂತ್, ವಿಷ್ಣು ಪ್ರಕಾಶ್ ಇತರರು ಉಪಸ್ಥಿತರಿದ್ದರು.