ಮದ್ದೂರು: ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ನನ್ನನ್ನು ಪರಿಗಣಿಸದೆ ಕದಲೂರು ರಾಮಕೃಷ್ಣ ಹಾಗೂ ಹರೀಶ್‌ಬಾಬು ಅವರ ಹೆಸರನ್ನು ಘೊಷಣೆ ಮಾಡಿದ್ದಾರೆ ಎಂದು ಆರೊಪಿಸಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಕೆ.ಎಂ.ಉದಯ್ ನಡೆಯನ್ನು ತಾಲೂಕಿನ ಸೊಳ್ಳೆಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಟಿ.ಪ್ರಕಾಶ್‌ಗೌಡ ಖಂಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಘದ ನಿರ್ದೇಶಕರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಲು ನನಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ ಎಂದು ಎಚ್ಚರಿಸಿದರು.
ಹಾಲು ಒಕ್ಕೂಟದ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು 3 ವರ್ಷಗಳಿಂದ ಆಕಾಂಕ್ಷಿಯಾಗಿದ್ದೇನೆ. ಈ ಬಗ್ಗೆ ಒಕ್ಕೂಟ ವ್ಯಾಪ್ತಿಯ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಮುಖಂಡರೊಂದಿಗೆ ಸಂಪರ್ಕಿಸಿ ಬೆಂಬಲ ಕೋರಿದ್ದೆ. ಇದಕ್ಕೆ ಸಹಕಾರ ನೀಡುವುದಾಗಿ ಅವರು ಆಶ್ವಾಸನೆ ನೀಡಿದ್ದರು ಎಂದರು.
ಒಕ್ಕೂಟ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ನಾನು ಈ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಹ ಭೇಟಿ ಮಾಡಿ, ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಈ ವೇಳೆ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣದ ಉಪ ಚುನಾವಣೆ ಮುಗಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ಹಾಗೂ ಮುಖಂಡರನ್ನು ಸಂಪರ್ಕಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅಷ್ಟರಲ್ಲಿ ಪಕ್ಷದ ನಾಯಕರು ಕದಲೂರು ರಾಮಕೃಷ್ಣ, ಹರೀಶ್‌ಬಾಬು ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಚುನಾವಣೆಗೆ ಇನ್ನೂ 3 ತಿಂಗಳ ಕಾಲಾವಕಾಶ ಇದೆ. ಅಷ್ಟರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಕೆ.ಎಂ.ಉದಯ್ ಅವರು ಪ್ರಸ್ತುತ ಆಯ್ಕೆ ಮಾಡಿರುವ ಇಬ್ಬರು ಸ್ಪರ್ಧೆಗಳ ಹೆಸರನ್ನು ಕೈ ಬಿಟ್ಟು ನನ್ನನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಹೀಗಾಗಿ ಒಕ್ಕೂಟದ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ನಾನು ಬಿಜೆಪಿ ಅಥವಾ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿಯೇ ಸ್ಪರ್ಧೆ ಮಾಡಿವುದು ಖಚಿತ ಎಂದು ಪ್ರಕಾಶ್‌ಗೌಡ ಸ್ಪಷ್ಟಪಡಿಸಿದರು.
ಸೊಳ್ಳೆಪುರ ಡೇರಿ ನಿರ್ದೇಶಕರಾದ ಎಸ್.ಕೆ.ಕೃಷ್ಣ, ಎಸ್.ದಯಾನಂದ್, ಸಿ.ನಾರಾಯಣ, ಡಿ.ಪುಟ್ಟಸ್ವಾಮಿ, ಎಸ್.ಡಿ.ವೆಂಕಟೇಶ್, ಶಶಿಕುಮಾರ್, ಎಸ್.ಪಿ.ಶಿವರಾಮು, ಮುಖಂಡರಾದ ಇಗ್ಗಲೂರು ಸೋಮಶೇಖರ್, ಪಿ.ರಾಮಚಂದ್ರ, ವೆಂಕಟೇಶ್, ಶ್ರೀನಿವಾಸ್, ಎಸ್.ಎಸ್.ಸುರೇಶ್ ಇದ್ದರು.