ಬೆಳಗಾವಿ: ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವುದರಿಂದ ಪ್ರಯೋಜನವಿಲ್ಲ. ನಿರ್ದಿಷ್ಟ ವಿಷಯದಲ್ಲಿ ಆಳವಾದ ಜ್ಞಾನ, ನೈಪುಣ್ಯತೆ ಗಳಿಸಿ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಎಂ. ಬಿದರಿ ಹೇಳಿದರು.
ನಗರದ ಎಸ್.ಜಿ. ಬಾಳೇಕುಂದ್ರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು. 30 ವರ್ಷಗಳ ಹಿಂದೆ ಬೆರಳೆಣಿಕೆಯಷ್ಟು ಕಾಲೇಜುಗಳಿದ್ದವು. ಇಂಜಿನಿಯರಿಂಗ್ ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ಈಗ ನೂರಾರು ಇಂಜಿನಿಯರಿಂಗ್ ಕಾಲೇಜುಗಳಿವೆ. ಮುಂದುವರಿದ ತಂತ್ರಜ್ಞಾನಗಳು ವಿದ್ಯಾರ್ಥಿಗಳ ಕಲಿಕೆಗೆ ಬಹಳಷ್ಟು ಅನುಕೂಲವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಕೀಳರಿಮೆ ಬಿಡಬೇಕು. ಕಠಿಣ ಶ್ರಮವಹಿಸಿ ತಮ್ಮ ಆಸಕ್ತಿಕರ ವಿಷಯಗಳಲ್ಲಿ ಜ್ಞಾನ ಸಂಪಾದಿಸಬೇಕು ಎಂದರು.
ಭಾರತ ಸುಮಾರು 135 ಕೋಟಿ ಜನಸಂಖ್ಯೆ ಹೊಂದಿದ ದೇಶ. ಇಷ್ಟೊಂದು ಜನಸಂಖ್ಯೆ ಇದ್ದರೂ ಕೂಡ ಪ್ರತಿದಿನ ಎರಡೆರಡು ಗಂಟೆ ಕಾಲ ಹೆಚ್ಚುವರಿಯಾಗಿ ಕೆಲಸ ಮಾಡುವವರು ಅತಿ ವಿರಳವಾಗಿದೆ. ದೇಶದ ಪ್ರಧಾನಮಂತ್ರಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸೇರಿ ಬೆರಳೆಣಿಕೆಯಷ್ಟು ಜನರು ಮಾತ್ರ ಹೆಚ್ಚಿನ ಸಮಯ ಕೆಲಸ ಮಾಡುತ್ತಾರೆ. ಆದರೆ, ಬಹುಜನರು ಹೆಚ್ಚಿನ ಕೆಲಸ ಮಾಡಿ, ಉತ್ಪಾದನಾ ಕ್ಷೇತ್ರ ಹಾಗೂ ದೇಶದ ಅಭಿವೃದ್ಧಿಯಲ್ಲಿ ಶ್ರಮಿಸಬೇಕಿದೆ. ಅಭಿವೃದ್ಧಿಯಲ್ಲಿ ಮುಂದುವರಿದ ದೇಶಗಳಲ್ಲಿ ಉದಾಹರಣೆಯಾಗಿ ತೆಗೆದುಕೊಳ್ಳುವುದಾರೆ ಅಲ್ಲಿನ ಹೆಚ್ಚಿನ ಜನ ಹೆಚ್ಚಿನ ಗಂಟೆಗಳನ್ನು ಕೆಲಸಕ್ಕೆ ವಿನಿಯೋಗಿಸುತ್ತಾರೆ. ನಮ್ಮ ದೇಶದಲ್ಲೂ ಯುವಕರಾದಿಯಾಗಿ ಎಲ್ಲರೂ ಈ ನಿಟ್ಟಿನಲ್ಲಿ ತಮ್ಮ ಸಾಮರ್ಥ್ಯ, ಕೌಶಲ ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಶಂಕರಿ ಬಿದರಿ ಅವರನ್ನು ಸತ್ಕರಿಸಲಾಯಿತು. ಪ್ರಥಮ ವರ್ಷ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಜಿ.ಸಿ. ಎಸ್.ಜಿ.ಬಿ.ಐಟಿ ಅಧ್ಯಕ್ಷ ಡಾ.ಎಫ್.ವಿ.ಮಾನ್ವಿ, ಪ್ರಾಚಾರ್ಯ ಡಾ.ಬಿ.ಆರ್. ಪಟಗುಂದಿ, ಬಿಎಚ್‌ಎಸ್ ವಿಭಾಗದ ಮುಖ್ಯಸ್ಥ ಡಾ. ಅಶೋಕ ಹುಲಗಬಾಳಿ ಇದ್ದರು.