ಬಾಗಲಕೋಟೆ: ಭರವಸೆ, ನಂಬಿಕೆ, ಬಜೆಟ್ ಘೋಷಣೆಗಳಂತಹ ಪ್ರಹಸನಗಳಿಂದ ಕೃಷ್ಣಾ ತೀರದ ಜನರು ಬೇಸತ್ತು ಹೋಗಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಽವೇಶನದಲ್ಲಿ ಯುಕೆಪಿ ಕುರಿತು ಸ್ಪಷ್ಟವಾದ ನಿರ್ಣಯ ಪ್ರಕಟಿಸಬೇಕು. ಇಲ್ಲವಾದಲ್ಲಿ ಜ.೧ ರಂದು ಬೆಂಗಳೂರು ವಿಧಾನಸೌಧ ಎದುರು ನೇಣು ಹಾಕಿಕೊಳ್ಳಲಾಗುವುದು ಎಂದು ಉತ್ತರ ಕರ್ನಾಟಕ ಮುಳಗಡೆ ಹಾಗೂ ಪ್ರವಾಹ ಸಂತ್ರಸ್ತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ನಾಗೇಶ ಗೋಲಶೆಟ್ಟಿ ಹೇಳಿದರು.
ನಗರದ ಪ್ರಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ತ್ವರಿತಗತಿಯಾಗಿ ಪೂರ್ಣಗೊಳಿಸಬೇಕು. ೫೨೪ ಮೀಟರ್ ವರೆಗೆ ನೀರು ನಿಲ್ಲಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಬಾಗಲಕೋಟೆ, ವಿಜಯಪುರ ಜಿಲ್ಲೆಯ ಜನರ ಆಶ್ವಾಸನೇ ಈಡೇರಿಸಬೇಕು. ಸಂತ್ರಸ್ತರ ಹಿತ ಕಾಯಲು ಸರ್ಕಾರ ಮುಂದಡಿ ಇಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಅಽಕಾರಕ್ಕೆ ಬರುವ ಸರ್ಕಾರಗಳು ಕೇವಲ ಮೇಕೆದಾಟು, ಭದ್ರ ಮೇಲ್ದಂಡೆ ಯೋಜನೆಗಳಿಗೆ ಮಹತ್ವ ನೀಡಿವೆ. ಆದರೇ ಮಹಾದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಮಹತ್ವ ನೀಡಿಲ್ಲ. ಇದರಿಂದ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳು ನಿಗಽತ ಸಮಯಕ್ಕೆ ಪೂರ್ಣಗೊಳ್ಳುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುಕೆಪಿ ಯೋಜನೆ ಆರಂಭವಾಗಿ ೬ ದಶಕಗಳು ಕಳೆಯುತ್ತಾ ಬಂದಿವೆ. ಇಂದಿಗೂ ಪೂರ್ಣಗೊಂಡಿಲ್ಲ. ಮುಳುಗಡೆ ಸಂತ್ರಸ್ತರಿಗೆ ಪೂರ್ಣ ಪ್ರಮಾಣದಲ್ಲಿ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸ್ಪಷ್ಟವಾದ ನಿರ್ಣಯ ಪ್ರಕಟಿಸಬೇಕು. ಇಲ್ಲವಾದಲ್ಲಿ ನೇಣು ಹಾಕಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಲು ಸಿದ್ಧ ಎಂದು ತಿಳಿಸಿದರು.
ಇನ್ನು ಬೀಳಗಿ ತಾಲೂಕಿನ ನಾಗರಾಳ ಪಿಕೆಪಿಎಸ್ ನಲ್ಲಿ ಸತ್ತವರ ಹಾಗೂ ವಿದೇಶದಲ್ಲಿ ವಾಸಿಸುತ್ತಿರುವವರ ಹೆಸರಿನಲ್ಲಿ ಸಾಲ ನೀಡಿ ಹಣ ಲಪಟಾಯಿಸಿರುವ ಪ್ರಕರಣದ ಸೂಕ್ತ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ ಅವರು, ರಾಜಕಾರಣಿಗಳು ಈ ವಿಷಯದಲ್ಲಿ ಪ್ರಭಾವ ಬೀರಿ ತಪ್ಪಿತಸ್ಥರ ಪರವಾಗಿ ನಿಲ್ಲಬಾರದು ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಎ.ಎ.ದಂಡಿಯಾ ಮಾತನಾಡಿ, ಸರ್ಕಾರ ಯುಕೆಪಿ ಯೋಜನೆಗಳಿಗೆ ಅಗತ್ಯ ಹಣ ಒದಗಿಸಿ ಪೂರ್ಣಗೊಳಿಸಬೇಕು. ಸಂತ್ರಸ್ತರಿಗೆ ಮುದ್ರಾಂಕ ಹಾಗೂ ನೋಂದಣಿ ಶುಲ್ಕದ ವಿನಾಯಿತಿ ಮತ್ತು ಸಂತ್ರಸ್ತರ ಮಕ್ಕಳಿಗೆ ಶಿಕ್ಷಣ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ ಅವರು, ಡಿ.೩ ರಿಂದ ಬಾಗಲಕೋಟೆಯಲ್ಲಿ ನಡೆಯಲಿರುವ ಮುಳುಗಡೆ ಸಂತ್ರಸ್ತರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಬಸವರಾಜ ಗೋನಾಳ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಏಕರೂಪದ ಬೆಲೆ ನಿಗದಿ ಮಾಡದೇ ಇರುವುದು ರೈತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಅಽವೇಶನಕ್ಕೂ ಮೊದಲೇ ಕಾರ್ಖಾನೆಯವರು ಮತ್ತು ರೈತ ಮುಖಂಡರನ್ನು ಕರೆದು ಚರ್ಚಿಸಿ ಟನ್ ಗೆ ೩೫೦೦ ದರ ನಿಗದಿಪಡಿಸಲು ಕ್ರಮವಹಿಸಬೇಕು. ಇಲ್ಲದಿದ್ದರೆ ಬೆಳಗಾವಿ ಅಽವೇಶನದ ಸಂದರ್ಭದಲ್ಲಿ ಮುತ್ತಿಗೆ ಹಾಕುವುದಾಗಿ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಬೀಳಗಿ ತಾಲೂಕು ಅಧ್ಯಕ್ಷ ಗಂಗಪ್ಪ ಮಾದರ, ಮುಖಂಡರಾದ ಶಿವನಗೌಡ ಪಾಟೀಲ, ಶ್ರೀಶೈಲ ಮೇಟಿ ಇದ್ದರು.