ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಭಾಗವಹಿಸಿದ್ದರು. ಸ್ನೇಹಜೀವಿ ಸಂಸ್ಥೆಯ ಆರ್.ಆನಂದ್, ಪ್ರಾಂಶುಪಾಲ ಡಾ.ವೆಂಕಟೇಶ್, ಜ್ಞಾನಪ್ರಕಾಶ್ ಇತರರು ಇದ್ದರು.  
ಜಿಲ್ಲೆ

ನಿರುದ್ಯೋಗಿ ಯುವಕರ ಬಾಳಿಗೆ ‘ಸ್ನೇಹಜೀವಿ’ ಬೆಳಕು

ಹುಣಸೂರು: ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ, ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಮೂಲಕ ನಿರುದ್ಯೋಗಿ ಯುವಕರ ಬಾಳಿಗೆ ಬೆಳಕಾಗುವ ವೇದಿಕೆಯಾಗುತ್ತಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸಂಸ್ಥೆ ವತಿಯಿಂದ ಸೋಮವಾರ ಸರ್ಕಾರ ಅಧಿಸೂಚನೆ ಹೊರಡಿಸಿರುವ ಪಿಸಿ(ಸಿವಿಲ್), ಸಿಎಆರ್, ಡಿಎಆರ್ ಪೊಲೀಸ್ ಹುದ್ದೆಗಳ ನೇಮಕಾತಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ತಮ್ಮ ನೇತೃತ್ವದ ಸ್ನೇಹಜೀವಿ ಸಂಸ್ಥೆ ಕಳೆದ 15 ವರ್ಷಗಳಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಶಿಕ್ಷಕ ಹುದ್ದೆಗಳು ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಾಗಾರ ಆಯೋಜಿಸುತ್ತಿದೆ. ಇದೀಗ ಸರ್ಕಾರ ಪೊಲೀಸ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಡ್ಡಾಯಗೊಳಿಸಿದೆ. ಹಾಗಾಗಿ ನಿರುದ್ಯೋಗಿ ಯುವಕರು ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗುವುದು ಕಡ್ಡಾಯ. ನಮ್ಮ ಸಂಸ್ಥೆ ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ನಗರಪ್ರದೇಶಗಳಿಗೆ ತೆರಳಿ 50 ಸಾವಿರ ರೂ. ತೆತ್ತು ತರಬೇತಿ ಪಡೆಯಲು ಆಗದ ಗ್ರಾಮೀಣ ನಿರುದ್ಯೋಗಿಗಳಿಗಾಗಿಯೇ ಇಂತಹ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ 370ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಲ್ಲಿ ಸಾಮಾನ್ಯವಾಗಿ ಆರ್ಥಿಕ ಹೊರೆ, ವಿಷಯಗಳ ಸಂಗ್ರಹದ ಕೊರತೆ, ಸಾಮಾಜಿಕ ಮಟ್ಟದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಾರೆ. ಇವೆಲ್ಲವನ್ನು ಮೆಟ್ಟಿ ನಿಂತು ದಿನದ ಬಹುಪಾಲು ಅಧ್ಯಯನದಲ್ಲಿ ನಿರತರಾದಲ್ಲಿ ಮಾತ್ರ ಯಶಸ್ಸು ಸಾಧ್ಯ. ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಶನದ ವೇಳೆ ಆಂಗ್ಲಭಾಷೆಯನ್ನೇ ಬಳಸಬೇಕೆಂದಿಲ್ಲ. ಕನ್ನಡವನ್ನೂ ಬಳಸುವ ಅವಕಾಶವಿದೆ. ಪೈಪೋಟಿ ಎಂದರೆ ಪೈಪೋಟಿಯೇ. ನೀವು ನಿಮ್ಮ ಸ್ಥಾನಕ್ಕಾಗಿ ಮಾತ್ರ ಯೋಚಿಸಿರಿ ಎಂದು ಸಲಹೆ ನೀಡಿದರು.

ನಗರ ಠಾಣೆ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಂಶುಪಾಲರಾದ ಡಾ.ವೆಂಕಟೇಶಯ್ಯ, ಜ್ಞಾನಪ್ರಕಾಶ್, ರಾಮೇಗೌಡ, ದೀಪಕ್, ಮಾಜಿ ಸೈನಿಕರಾದ ಪಿರಿಯಾಪಟ್ಟಣದ ಶಿವು, ಸ್ವಾಮಿ, ಸ್ನೇಹಜೀವಿ ಸಂಸ್ಥೆಯ ಮುಖ್ಯಸ್ಥ ಆರ್.ಆನಂದ್, ನಾಗರಾಜು ಇದ್ದರು.