ಹನೂರಿನಲ್ಲಿ ಜೆಡಿಎಸ್ ಹಾಗೂ ಎನ್‌ಸಿಜಿ ಕಾಂಪಿಟೇಟಿವ್ ಇನ್ಸ್‌ಟಿಟ್ಯೂಟ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಉಚಿತ ತರಬೇತಿ ಕಾರ್ಯಾಗಾರವನ್ನು ಎಂ.ಆರ್ ಮಂಜುನಾಥ್ ಉದ್ಘಾಟಿಸಿದರು. ನಾಗಪ್ಪ, ಗಿರಿಧರ್ ಪೂಜಾರ್, ಸುಶ್ಮಿತಾ, ನಾಗೇಂದ್ರಬಾಬು ಇದ್ದರು.  
ಜಿಲ್ಲೆ

ನಿರುದ್ಯೋಗದ ಸಮಸ್ಯೆ ನೀಗಿಸಲು ಪ್ರಯತ್ನ

ಹನೂರು: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳು ಹಾಗೂ ಸ್ಪರ್ಧಾಕಾಂಕ್ಷಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಉಚಿತವಾಗಿ 6 ತಿಂಗಳ ಕಾಲ ತರಬೇತಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎಂ.ಆರ್ ಮಂಜುನಾಥ್ ತಿಳಿಸಿದರು.


ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಜೆಡಿಎಸ್ ಹಾಗೂ ಬೆಂಗಳೂರು ಎನ್‌ಸಿಜಿ ಕಾಂಪಿಟೇಟಿವ್ ಇನ್ಸ್ಟಿಟ್ಯೂಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಉಚಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.


ಜಿಲ್ಲೆಯಲ್ಲಿಯೇ ಹನೂರು ವಿಧಾನಸಭಾ ಕ್ಷೇತ್ರ ಹೆಚ್ಚು ವಿಸ್ತೀರ್ಣವನ್ನು ಹೊಂದಿದ್ದು, ಬಹುತೇಕ ಗ್ರಾಮಗಳು ಕಾಡಂಚಿನಲ್ಲಿವೆ. ಇಲ್ಲಿನ ವಿದ್ಯಾರ್ಥಿಗಳಲ್ಲಿ ಪ್ರತಿಭಾವಂತರಿದ್ದು, ಕಡುಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತರಬೇತಿ ಸಿಗುತ್ತಿಲ್ಲ. ಇತ್ತ ನಗರ ಪ್ರದೇಶಗಳಲ್ಲಿ ಹಣ ನೀಡಿ ತರಬೇತಿ ಪಡೆದುಕೊಳ್ಳಲು ಶಕ್ತರಿಲ್ಲ. ಇದರಿಂದ ಪ್ರತಿಭಾವಂತರಾಗಿದ್ದರೂ ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಕ್ಷೇತ್ರದಲ್ಲಿ ನಿರುದ್ಯೋಗದ ಸಮಸ್ಯೆ ಎದುರಾಗಿದೆ. ಇದನ್ನು ಮನಗಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಕೆಎಎಸ್, ಪಿಎಸೈ, ಎಫ್‌ಡಿಎ, ಎಸ್‌ಡಿಎ ಸೇರಿದಂತೆ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸುಮಾರು 6 ತಿಂಗಳ ಕಾಲ ಉಚಿತವಾಗಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.