ಸುಗ್ಗನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಆರ್.ಚಿದಾನಂದ ಮತಯಾಚಿಸಿದರು. ಶಾಂತರಾಜು, ಬಸವರಾಜು, ಲೋಕೇಶ್, ನಿತಿನ್, ರೂಪೇಶ್, ಮನು ಇದ್ದರು.  
ಜಿಲ್ಲೆ

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಬೆಂಬಲ ನೀಡಿ

Hassan

ಚನ್ನರಾಯಪಟ್ಟಣ: ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಬಿಜೆಪಿಗೆ ಮತ ನೀಡಿ ಎಂದು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಆರ್.ಚಿದಾನಂದ್ ಮನವಿ ಮಾಡಿದರು.

ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಸುಗ್ಗನಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, ತಾಲೂಕಿನಲ್ಲಿ ಸಂಪನ್ಮೂಲ ಇಲ್ಲದ ಕಾರಣ ಜನರ ಆರ್ಥಿಕ ಪರಿಸ್ಥಿತಿ ಕೆಳಮಟ್ಟದಲ್ಲಿದೆ. ರಾಜಕಾರಣಿಗಳು ಕೇವಲ ರಸ್ತೆಗಳ ಅಭಿವೃದ್ಧಿ, ಬೀದಿ ದೀಪ ಹಾಕಿಸಿದರೆ ಸಾಲದು. ಬದಲಾಗಿ ಜನರನ್ನು ಆರ್ಥಿಕವಾಗಿ ಮೇಲೆತ್ತಿ ಬದುಕು ಕಟ್ಟಿಕೊಳ್ಳುವ ಮಟ್ಟಕ್ಕೆ ತರಬೇಕು. ಈ ಕೆಲಸ ಆಗಬೇಕಾದರೆ ಒಮ್ಮೆ ಅವಕಾಶ ನೀಡಬೇಕು. ಅಲ್ಲದೇ, ಈ ಬಾರಿ ಶಾಸಕನಾಗಿ ಆಯ್ಕೆಯಾದಲ್ಲಿ ತಾಲೂಕಿಗೆ ಕೈಗಾರಿಕೆಗಳನ್ನು ತಂದು ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇತರ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದರಿಂದ ಪ್ರಯೋಜನ ಇಲ್ಲ. ಹಾಗಾಗಿ, ಕಮಲದ ಗುರುತಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಮಹಿಳೆಯರು, ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ರೀತಿ ಬಿಜೆಪಿ ಪ್ರಣಾಳಿಕೆ ಸಿದ್ಧಪಡಿಸಿದೆ. ಸರ್ಕಾರ ರಚನೆಯಾದ ತಿಂಗಳೊಳಗಾಗಿ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಪ್ರಸ್ತುತ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮುಂದೆ ಕಾಂಗ್ರೆಸ್-ಜೆಡಿಎಸ್ ಪ್ರಣಾಳಿಕೆಗಳು ನಗಣ್ಯವಾಗಿವೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ 16 ಅಂಶಗಳ ಪ್ರಣಾಳಿಕೆ ನೀಡಲಾಗಿದೆ. ಕಟ್ಟಕಡೆಯ ವ್ಯಕ್ತಿಗೂ ಯೋಜನೆ ಸಿಗುವಂತೆ ಪ್ರಣಾಳಿಕೆ ರೂಪಿಸಲಾಗಿದೆ. ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಕ್ಷಣ, ಉದ್ಯೋಗ, ನೀರಾವರಿಗೆ ಒತ್ತು ನೀಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ 3 ಉಚಿತ ಸಿಲಿಂಡರ್ ನೀಡುವ ಮೂಲಕ ಬಿಜೆಪಿ ಬಡವರ ಪರ ಎಂಬುದನ್ನು ತೋರಿಸಿದೆ. ಏಕರೂಪ ನಾಗರಿಕ ಸಂಹಿತೆ ಜಾರಿ ಮೂಲಕ ಭಾರತೀಯರೆಲ್ಲರೂ ಒಂದೇ ಎಂಬ ಸಂದೇಶ ನೀಡಲಾಗುವುದು ಎಂದರು.

ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಂತರಾಜು, ನವಿಲೆ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು, ಮುಖಂಡರಾದ ಬೆಳಗುಳಿ ಲೋಕೇಶ್, ಕಾಂತರಾಜಪುರ ನಿತಿನ್, ರೂಪೇಶ್, ಮನು ಇತರರು ಹಾಜರಿದ್ದರು.