ಜಿಲ್ಲೆ

ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದೆ ಜಿಮ್

ಹುಬ್ಬಳ್ಳಿ: ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್) 10.25 ಲಕ್ಷ ಕೋಟಿ ರೂ. ಹೂಡಿಕೆ ಒಪ್ಪಂದ ಹಾಗೂ 6 ಲಕ್ಷ ಉದ್ಯೋಗ ಸೃಷ್ಟಿಯ ಖಾತ್ರಿಯೊಂದಿಗೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ರಾಜ್ಯ ಕಾಂಗ್ರೆಸ್ ಆಡಳಿತಕ್ಕೆ ಮತ್ತೊಂದು ಗರಿ ತಂದುಕೊಟ್ಟಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಫೆ. 11ರಿಂದ 14ರವರೆಗೆ ನಡೆದ ಜಿಮ್2025 ಕರ್ನಾಟಕದ ಬೆಳವಣಿಗೆ ಮತ್ತು ಹೊಸ ಚಿಂತನೆಗಳಿಗೆ ಬಲವಾದ ಶಕ್ತಿ ತುಂಬಿದೆ. ಆರ್ಥಿಕತೆಗೆ ಉತ್ತೇಜನ ನೀಡುವುದಲ್ಲದೆ ಮುಂಬರುವ ದಿನಗಳಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಭದ್ರಬುನಾದಿಯಾಗಲಿದೆ. ಬಂಡವಾಳ ಹರಿದು ಬರುವ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂಬುವುದು ಮತ್ತೊಮ್ಮೆ ಸಾಬೀತು ಮಾಡಿದೆ. ಈ ಮೂಲಕ ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ಕೂಡ ರವಾನಿಸಿದೆ ಎಂದಿದ್ದಾರೆ.

ನಿರೀಕ್ಷೆಗೂ ಮೀರಿ ಜಿಮ್ ಯಶಸ್ವಿಯಾಗಿದೆ. ನಮ್ಮ ಆರಂಭಿಕ ಗುರಿಯಾದ 7.5ಲಕ್ಷ ಕೋಟಿ ರೂ. ಹೂಡಿಕೆ ದಾಟಿ, 10.25ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ ಒಪ್ಪಂದವಾಗಿದೆ. ಇದರಲ್ಲಿ ಶೇ. 40ರಿಂದ 50ರಷ್ಟು ಮೊತ್ತವು ಉತ್ತರ ಕರ್ನಾಟಕಕ್ಕೆ ಲಾಭವಾಗುವಂತೆ ಮಾಡಿದ್ದು, ರಾಜ್ಯದ ಸಮತೋಲಿತ ಬೆಳವಣಿಗೆಯತ್ತ ದೊಡ್ಡ ಹೆಜ್ಜೆಯಾಗಿದೆ. ರಾಜ್ಯದ ಕೈಗಾರಿಕಾ ವಲಯದಲ್ಲಿ ನವ ಯುಗ ಪ್ರಾರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.