ಜಿಲ್ಲೆ

ನಿರೀಕ್ಷಿತ ಫಲಿತಾಂಶ ದೊರೆಯದಿದ್ದರೆ ಪಕ್ಷ ವಿಸರ್ಜನೆ: ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ

ಮೈಸೂರು: ಮಿಷನ್ -123 ಗುರಿ ಇಟ್ಟುಕೊಂಡು ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಒಂದು ವೇಳೆ ನಿರೀಕ್ಷಿತ ಫಲಿತಾಂಶ ದೊರೆಯದಿದ್ದರೆ ಪಕ್ಷವನ್ನೇ ವಿಸರ್ಜಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದರು.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ವತಿಯಿಂದ ನಗರದಲ್ಲಿ ಬುಧವಾರದಿಂದ ಆಯೋಜಿಸಿರುವ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಿರ್ದಿಷ್ಟ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ಮುಂಚಿತವಾಗಿಯೇ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತಿದೆ. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಇಲ್ಲವಾದರೆ ಯಾವುದೇ ಮುಲಾಜಿಲ್ಲದೇ ಪರ್ಯಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದರು.
ಜೆಡಿಎಸ್ ಎಲ್ಲಿದೆ?, 40ರಿಂದ 50 ಸ್ಥಾನ ಪಡೆದು ಮೈತ್ರಿ ಮಾಡಿಕೊಳ್ಳಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮೈತ್ರಿ, ಸಮ್ಮಿಶ್ರ ಸರ್ಕಾರವನ್ನು ನೋಡಿ ನನಗೆ ಸಾಕಾಗಿದೆ. ಒಂದು ವೇಳೆ ಮೈತ್ರಿ ಅನಿವಾರ್ಯತೆ ಬಿದ್ದರೆ ನಾನು ಮುಂದೆ ಬಾರದೆ ನಿಮ್ಮಲ್ಲಿಯೇ ಯಾರನ್ನಾದರೂ ಕೂರಿಸುತ್ತೇನೆ. ಈಗಾಗಲೇ ನಾನು ಎರಡು ಬಾರಿ ಮುಖ್ಯಮಂತ್ರಿ ಅಗಿದ್ದೇನೆ. ಮುಖ್ಯಮಂತ್ರಿ ಆಗಲೇಬೇಕು ಎನ್ನುವ ಆಸೆ ನನ್ನದಲ್ಲ. ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವಂತಹ ಕಾರ್ಯಕ್ರಮಗಳನ್ನು ನೀಡುವ ಮೂಲಕ ಅವರ ಬೆಂಬಲಕ್ಕೆ ನಿಲ್ಲಬೇಕು ಎನ್ನುವ ಉದ್ದೇಶವಿದೆ. ಇದು ಸಾಧ್ಯವಾಗದಿದ್ದರೆ ಪಕ್ಷವನ್ನು ಇಟ್ಟುಕೊಂಡು ಏನು ಮಾಡುವುದು, ವಿಸರ್ಜಿಸಬೇಕಾಗುತ್ತದೆ ಎಂದರು.
ಈಗ ಕೇವಲ ಭಾಷಣದಿಂದ ಏನು ಆಗುವುದಿಲ್ಲ ಎನ್ನುವುದು ಜನರಿಗೆ ಗೊತ್ತಾಗಿದೆ. ಜನರಿಗೆ ಆಹಾರ ಸಿಗುತ್ತಿಲ್ಲ ಎನ್ನುವ ದೇಶದ ಪಟ್ಟಿಯಲ್ಲಿ ಪಾಕಿಸ್ತಾನ, ಬಾಂಗ್ಲಾ ಹಾಗೂ ಕೊನೆ ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕಿಂತಲೂ ಭಾರತ ಕೆಳಗಿದೆ ಎನ್ನುವ ವರದಿ ಆತಂಕ ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮಾಡುತ್ತಿರುವ ಜೋಡೋ ಯಾತ್ರೆಗೆ ದಿನಕ್ಕೆ 2ರಿಂದ 3 ಕೋಟಿ ರೂ. ಖರ್ಚಾಗುತ್ತಿದೆ. ವಾಹನ, ಹಣಕೊಟ್ಟು ಜನರನ್ನು ತರಲಾಗುತ್ತಿದೆ. ಆದರೆ ಜನರು ಸ್ವಯಂ ಪ್ರೇರಿತವಾಗಿ ಜೆಡಿಎಸ್ ಬೆಂಬಲಿಸುತ್ತಿದ್ದಾರೆ. ಆದ್ದರಿಂದ ಜನರಿಗೋಸ್ಕರ ಪಕ್ಷ ಅಧಿಕಾರಕ್ಕೆ ತರಲು ಕೊಟ್ಟಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಾಮಾಜಿಕ ಜಾಲತಾಣ ಸೇರಿದಂತೆ ಇನ್ನಿತರ ವೇದಿಕೆ ಮೂಲಕ ಜನರನ್ನು ತಲುಪಬೇಕು ಎಂದು ಸಲಹೆ ನೀಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಜನರಿಗೆ ಉತ್ತಮ ಕಾರ್ಯಕ್ರಮಗಳು ದೊರೆಯುತ್ತಿದೆ. ಇದರಿಂದ ಆಂಧ್ರ, ತೆಲಂಗಾಣ, ತಮಿಳುನಾಡಿ, ಕೇರಳದಲ್ಲಿ ಜನರು ನೆಮ್ಮದಿಯಿಂದ ಇದ್ದಾರೆ. ಆದರೆ ರಾಷ್ಟ್ರೀಯ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಿ ಗೆಲ್ಲುವ ಹಾದಿಯಲ್ಲಿ ಎಲ್ಲ ಅಭ್ಯರ್ಥಿಗಳು ಮುನ್ನಡೆಯಬೇಕು. ಇದಕ್ಕಾಗಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಹೆಚ್ಚು ಖರ್ಚು ಮಾಡದೆ ಜನರನ್ನು ತಲುಪುವ ಮಾರ್ಗ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.