ಜಿಲ್ಲೆ

ನಿರಾಸಕ್ತಿ, ನಿರ್ಲಕ್ಷ್ಯಕ್ಕೆ ಮಕ್ಕಳ ಭವಿಷ್ಯ ಕತ್ತಲಲ್ಲಿ

ಚಾಮರಾಜನಗರ: ಪಾಲಕರ ನಿರಾಶಕ್ತಿ, ಕೌಟುಂಬಿಕ ಸಮಸ್ಯೆಗಳು, ಮನೆ ಕೆಲಸ ಹಾಗೂ ಇನ್ನಿತರೆ ಕಾರಣಗಳಿಂದ ಇಂದಿಗೂ ಹಲವಾರು ಮ್ಕಕಳು ಶಾಲೆಯನ್ನು ತೊರೆದಿದ್ದು, ಬಡ ಮಕ್ಕಳಿಗೆ ಸರ್ಕಾರಿ ಶಾಲೆಗಳು ಕೂಡ ದೂರಾಗುತ್ತಿದೆ.

ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ 247 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದರು. ಶಾಲಾ ಶಿಕ್ಷಣ ಇಲಾಖೆ ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ಉದ್ದೇಶದಿಂದ ವಿಶೇಷ ದಾಖಲಾತಿ ಆಂದೋಲನವನ್ನು ನಡೆಸಿ ಒಟ್ಟು 119 ಮಕ್ಕಳನ್ನು ಮರಳಿ ಮುಖ್ಯವಾಹಿನಿಗೆ ಕರೆತಂದಿದ್ದಾರೆ. ಅದಾಗ್ಯೂ ಇನ್ನು 128 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಕಾಡು, ಗುಡ್ಡಗಾಡಿನಿಂದ ಕೂಡಿರುವ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಹನೂರು ತಾಲೂಕಿನಲ್ಲಿ 44 ಮಕ್ಕಳು, ಚಾಮರಾಜನಗರದಲ್ಲಿ 30, ಕೊಳ್ಳೇಗಾಲ 25, ಗುಂಡ್ಲುಪೇಟೆ 19 ಹಾಗೂ ಯಳಂದೂರು ತಾಲೂಕಿನಲ್ಲಿ 10 ಮಕ್ಕಳು ವಿವಿಧ ಕಾರಣಗಳಿಂದ ಶಾಲೆಯನ್ನು ತೊರೆದಿದ್ದಾರೆ.

ಪಾಲಕರ ಕಲಹ ಮತ್ತು ಇನ್ನಿತರೆ ಕೌಟಿಂಬಿಕ ಸಮಸ್ಯೆಗಳಿಂದಲೇ ಹೆಚ್ಚು ಮಕ್ಕಳು ಶಾಲೆ ಬಿಟ್ಟಿದ್ದಾರೆ. ಉಳಿದಂತೆ ಶಿಕ್ಷಣದ ಮಹತ್ವ ತಿಳಿಯದ ಪಾಲಕರು, ನಿರಾಶಕ್ತಿಯ ಕಾರಣದಿಂದ ಮಕ್ಕಳ ಉಜ್ವಲ ಭವಿಷ್ಯವನ್ನು ಮೊಟಕುಗೊಳಿಸುತ್ತಿದ್ದಾರೆ. ಬುಡಕಟ್ಟು ಜನಾಂಗದ ಮಕ್ಕಳು ಕೂಡ ಹಲವಾರು ಕಾರಣಕ್ಕೆ ಶಾಲೆಯಿಂದ ದೂರ ಉಳಿದಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ ಎಂಬ ಆರೋಪ ಕೇಳಿಬರುತ್ತಿದೆ. ಆಗಾಗಿ ಮಕ್ಕಳ ಕಲಿಕೆಯಲ್ಲಿ ಉಂಟಾಗುತ್ತಿರುವ ಅಸಮತೋಲನವನ್ನು ಹೋಗಲಾಡಿಸುವ ದೃಷ್ಟಿಯಲ್ಲಿ ಹಲವು ಹಿರಿಯರು, ಶಿಕ್ಷಕರು ಹಾಗೂ ಅಧಿಕಾರಿಗಳಿಂದ ಈ ವಾರದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.