ಜಿಲ್ಲೆ

ನಿರಂತರವಾಗಿ ಕೊಡವರ ತೇಜೋವಧೆ

ಗೋಣಿಕೊಪ್ಪಲು: ಕೊಡಗು ಜಿಲ್ಲೆಯಲ್ಲಿ ಕೊಡವ ಜನಾಂಗದವರು ತಮ್ಮದೇ ಆದ ಪದ್ಧತಿ, ಪರಂಪರೆ ಆಚರಣೆ ಮೂಲಕ ಶಾಂತಿ ಸೌಹಾರ್ದತೆ ಹಾಗೂ ಆತಿಥ್ಯಕ್ಕೆ ಹೆಸರಾದವರು. ಆದರೆ, ಇತ್ತೀಚಿನ ವರ್ಷಗಳಿಂದ ಕೊಡವ ಜನಾಂಗದ ತೇಜೋವಧೆ, ಅವಮಾನಗೊಳಿಸುವುದು, ಮತೀಯ ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿರುವದು ಜಿಲ್ಲೆಯಲ್ಲಿ ಅಧಿಕವಾಗುತ್ತಿದೆ ಎಂದು ಟಿ.ಶೆಟ್ಟಿಗೇರಿ ಸಿಎನ್‌ಸಿ ಸದಸ್ಯ ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ ಆರೋಪಿಸಿದರು.

ಪೊನ್ನಂಪೇಟೆ ಪತ್ರಕರ್ತರ ಸಂಘದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಜನಾಂಗದ ಶ್ರೀಮಂತ ಸಂಸ್ಕೃತಿಗೆ ದೇಶ-ವಿದೇಶದಲ್ಲಿ ಹೆಚ್ಚಿನ ಮನ್ನಣೆ ಇದೆ. ಕಟ್ಟೆಮಾಡು ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಕೆಲ ವ್ಯಕ್ತಿಗಳು ತಮ್ಮ ಇಷ್ಟ ಪ್ರಕಾರ ಮಾಡಿಕೊಂಡ ಬೈಲಾದಲ್ಲಿ ಕೊಡವರ ಕುಪ್ಪೆ-ಚ್ಯಾಲೆ ಹಾಗೂ ಕೊಡವತಿ ಪೊಡೆಯ (ಸೀರೆ) ಧರಿಸಿ ದೇವಸ್ಥಾನ ಪ್ರವೇಶ ಮಾಡಬಾರದೆಂಬುದು ನಮ್ಮ ಸಂಸ್ಕೃತಿಗೆ ಮಾಡಿದ ಅವಮಾನವಾಗಿದೆ ಎಂದು ದೂರಿದರು.

ಕೊಡವರ ಪುಣ್ಯಕ್ಷೇತ್ರ ತಲಕಾವೇರಿ ಪ್ರವೇಶಕ್ಕೆ ನಿರ್ಬಂಧ ಯತ್ನ, ದೇವಾಟ್ ಪರಂಬು ಕೊಡವ ನರಮೇಧ ಸ್ಮಾರಕ ಭಗ್ನ, ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಸಗಣಿ ಮೆತ್ತಿದ್ದು, ಎಫ್.ಎಂ.ಕಾರ್ಯಪ್ಪ ಪ್ರತಿಮೆಗೆ ಅವಮಾನ ಮಾಡಿದ್ದು, ಜನರಲ್ ಕೆ.ಎಸ್.ತಿಮ್ಮಯ್ಯ ಪ್ರತಿಮೆ ಕೆಡವಿದ್ದು, ಕೊಡವರ ನಾಮಪದವನ್ನು ರಾಜ್ಯ ಪತ್ರದಲ್ಲಿ ಪ್ರಕಟವಾಗದಂತೆ ತಡೆದದ್ದು, ಕೊಡವರ ವಿಶೇಷ ತೋಕ್ ಹಕ್ಕನ್ನು ಕಸಿಯಲು ನ್ಯಾಯಾಲಯದಲ್ಲಿ ತಕರಾರು ಹಾಕಿದ್ದು, ಕೊಡವ ಬೈ ರೇಸ್ ವಿನಾಯಿತಿಯನ್ನು ಗೌಡ ಬೈ ರೇಸ್ ಮಾಡಲು ಹೊರಟಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವುದು ಸರಿಯಲ್ಲ ಎಂದರು.

ಕೊಡವ ರೈತರಿಗೆ ನಕ್ಸಲ್ ಬೆದರಿಕೆ ಹಾಗೂ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದ್ದು, ಕೊಡವರ ಎಸ್‌ಟಿ ಬೇಡಿಕೆಗೆ ನಿರಂತರ ತಡೆ ಒಡ್ಡಿದ್ದು ಒಳಗೊಂಡಂತೆ ಸುಮಾರು 24 ವಿವಿಧ ಪ್ರಕರಣಗಳಲ್ಲಿ ಕೊಡವ ಮಹಿಳೆಯರೂ ಸೇರಿದಂತೆ ತೇಜೋವಧೆಗೆ ನಿರಂತರ ಯತ್ನಿಸಿರುವುದು, ಮುಂದೆ ಜಾತಿ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಹೇಳಿದರು.

35 ವರ್ಷದಿಂದ ಕೊಡವರ ವಿರುದ್ಧ ನಿರಂತರ ಪಿತೂರಿ ನಡೆಯುತ್ತಾ ಬಂದಿದೆ. ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನವನ್ನು ಸರ್ಕಾರ ಮುಜರಾಯಿ ಇಲಾಖೆ ವಶಕ್ಕೆ ತೆಗೆದುಕೊಂಡು ಎಲ್ಲ ಜನಾಂಗಕ್ಕೂ ತಮ್ಮ ಸಂಸ್ಕೃತಿಯ ವಸ್ತ್ರದೊಂದಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಸಿಎನ್‌ಸಿ ಸದಸ್ಯ ಅಜ್ಜಿಕುಟೀರ ಲೋಕೇಶ್ ಕೊಡವ ಮಾತನಾಡಿ, ಸಿಎನ್‌ಸಿ ನಾಚಪ್ಪ ಅವರು ಕೊಡವ ಲ್ಯಾಂಡ್ ಅಸ್ತಿತ್ವಕ್ಕೆ ತರಲು ಸುಪ್ರೀಂಕೋರ್ಟ್ ವಕೀಲ ಸುಬ್ರಮಣಿಯನ್ ಸ್ವಾಮಿ ಅವರ ಮೂಲಕ ನಿರಂತರ ಹೋರಾಟ ನಡೆಸಿದ್ದಾರೆ. ಇದೀಗ ಕೊಡಗಿನಲ್ಲಿ ಐಸಿಸ್ ಉಗ್ರರಿಗಿಂತ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದೆ. ಕೊಡವರ ಹಕ್ಕು ಬಾಧ್ಯತೆಗಳಿಗೆ ಹೋರಾಡುತ್ತಿರುವ ನಾಚಪ್ಪ ಅವರನ್ನು ಗಡಿಪಾರು ಮಾಡಲು ಒತ್ತಾಯಿಸುತ್ತಿರುವ ಇವರಿಗೆ ಈ ಮಣ್ಣಿನಲ್ಲಿ ವಾಸಿಸುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಡವರನ್ನು ನಿರಂತರ ಅವಮಾನ ಮಾಡುತ್ತಿರುವುದರ ಹಿಂದೆ ನಕ್ಸಲ್ ಕೈವಾಡವಿದ್ದು ಇದನ್ನು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು. ಕೊಡಗಿನ ಭೂಮಿ ನಿರಂತರ ಅನ್ಯರ ಪಾಲಾಗುತ್ತಿದ್ದು ಆತಂಕ ಹೆಚ್ಚಳವಾಗಿದೆ. ಶಾಂತಿ ಕದಡುವವರಿಗೆ ಜಿಲ್ಲಾಡಳಿತ ಕಡಿವಾಣ ಹಾಕದಿದ್ದಲ್ಲಿ ಮುಂದೆ ಹಲವು ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಕಿರಿಯಮಾಡ ಶರೀನ್ ಕೊಡವ, ಟಿ.ಶೆಟ್ಟಿಗೇರಿಯ ಮಚ್ಚಾಮಾಡ ರಂಜಿ ಉಪಸ್ಥಿತರಿದ್ದರು.