ಕೊಳ್ಳೇಗಾಲದ ಹೊಸ ಹಂಪಾಪುರ ಗ್ರಾಮದಲ್ಲಿ ಭಾನುವಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಮತಯಾಚನೆ ಮಾಡಿದರು. ಎಸ್.ಜಯಣ್ಣ, ಜಿ.ಎನ್. ನಂಜುಂಡಸ್ವಾಮಿ. ತೋಟೇಶ್ ಇತರರು ಇದ್ದಾರೆ. 
ಜಿಲ್ಲೆ

ನಿರಂತರ ಸೋಲಿಗೆ ಮುಕ್ತಿ ನೀಡುವಂತೆ ಎಆರ್‌ಕೆ ಮನವಿ

ಕೊಳ್ಳೇಗಾಲ: ಈ ಬಾರಿ ಕ್ಷೇತ್ರದ ಜನರು ನನ್ನ ನಿರಂತರ ಸೋಲಿಗೆ ಮುಕ್ತಿ ನೀಡಿ ಗೆಲುವು ನೀಡುತ್ತಾರೆ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಕೆಂಪನಪಾಳ್ಯ, ತಿಮ್ಮರಾಜೀಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭಾನುವಾರ ಮತಯಾಚನೆ ಮಾಡಿದ ಬಳಿಕ ಹೊಸ ಹಂಪಾಪುರ ಗ್ರಾಮದ ನಾಯಕರ ಬೀದಿಯಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

1 ವೋಟಿನ ಮಹತ್ವ ನನಗೆ ತಿಳಿದಿದೆ. ಎಲ್ಲ ಪಕ್ಷಗಳು 1 ಮತದ ಮಹತ್ವ ಹೇಳಬೇಕಾದರೆ ನನ್ನ ಉದಾಹರಣೆ ನೀಡುತ್ತಾರೆ. 2018ರಲ್ಲಿ ಎದುರಾಳಿ ಎನ್.ಮಹೇಶ್ ಮೂರು ಬಾರಿ ಸೋತ್ತಿದ್ದೇನೆ ಎಂಬ ಕನಿಕರದ ಮತ ಪಡೆದು ಗೆದ್ದರು. ಮತ್ತೆ ಇದೀಗ ಅವರೇ ನನ್ನ ಎದುರಾಳಿಯಾಗಿದ್ದಾರೆ. ಉತ್ತಮ ಶಾಸಕನ ಆಯ್ಕೆ ಮಾಡುವುದು ನಿಮ್ಮ ಕೈಯಲಿದೆ. ನಾನು ಆರು ಬಾರಿ ಸತತ ಸೋಲುಂಡ ಜೀವ. ಈ ಹಿನ್ನೆಲೆಯಲ್ಲಿ ನನ್ನ ಮೇಲೆ ಕನಿಕರ ಇಟ್ಟು ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಳೆದ ಬಾರಿ 52 ಸಾವಿರ ಮತ ನೀಡಿದ್ದೀರಾ. ಈ ಋಣ ತೀರಿಸಬೇಕು. ನಿಮ್ಮ ಸೇವೆ ಮಾಡಬೇಕು. ನನಗೊಂದು ಅವಕಾಶ ಮಾಡಿಕೊಡಿ ಎಂದರು.

ಜನರ ಹಿತಕ್ಕೆ ಗ್ಯಾರಂಟಿ ಕಾರ್ಡ್: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆ, ಬಡವರಿಗೆ 10 ಕೆಜಿ ಅಕ್ಕಿ, 200 ಯೂನಿಟ್ ಕರೆಂಟ್, ಮನೆಯ ಗೃಹಿಣಿಗೆ 2 ಸಾವಿರ ರೂ., ನಿರುದ್ಯೋಗ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ. ಹೀಗೆ ಹಲವು ಅನುಕೂಲವನ್ನು ಕಾಂಗ್ರೆಸ್ ಸರ್ಕಾರ ನೀಡಲಿದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಜನರು ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ದರ್ಶನ್‌ಗೆ ಬಾಲರಾಜ್ ಸಾಥ್ ನೀಡಬೇಕಿತ್ತು: ಎಸ್.ಬಾಲರಾಜು ಹಾಗೂ ದಿ.ಆರ್.ಧ್ರುವನಾರಾಯಣ ಆಪ್ತರು. ರಾಜಕೀಯವಾಗಿ ಒಟ್ಟಾಗಿ ಬೆಳೆದು ಬಂದವರು. ಧ್ರುವ ಅವರು ಕಾಲವಾದ ಬಳಿಕ ಅವರ ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ. ದರ್ಶನ್ ಧ್ರುವ ನಂಜನಗೂಡಿನಲ್ಲಿ ಸ್ಪರ್ಧಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲರಾಜ್ ದರ್ಶನ್‌ಗೆ ಸಾಥ್ ನೀಡಬೇಕಿತ್ತು. ಆದರೆ ಬಿಜೆಪಿ ಸೇರಿ ತಪ್ಪಿನ ಕ್ರಮ ತೆಗೆದುಕೊಂಡಿದ್ದಾರೆ ಎಂದರು.

ಮಾಜಿ ಶಾಸಕ ಎಸ್.ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಕೊಪ್ಪಾಳಿ ಮಹದೇವನಾಯಕ, ಮುಖಂಡ ಓಲೆ ಮಹದೇವ, ನಂಜುಂಡಸ್ವಾಮಿ, ಅಬ್ದುಲ್ ಅಜೀಜ್, ಮಾದೇಶ್ ಉಪ್ಪಾರ್, ಲೋಕೇಶ್, ಮಂಜು, ಬಸವಣ್ಣ ನಾಯಕ, ಮುಳ್ಳೂರು ಮಂಜು, ಕಂದಳ್ಳಿ ನಂಜುಂಡಸ್ವಾಮಿ, ಲೋಕೇಶ್, ಅಣಗಳ್ಳಿ ಬಸವರಾಜು ಮತ್ತಿತರಿದ್ದರು.